ಕೊಯ್ಲದಲ್ಲಿ ಸರಣಿ ಕಳ್ಳತನ: ಎರಡು ಮನೆಗಳಿಂದ ಲಕ್ಷಾಂತರ ಮೌಲ್ಯದ ನಗ-ನಗದು ಕಳವು
.gif)
ಉಪ್ಪಿನಂಗಡಿ, ಎ.26: ಕೊಯಿಲ ಗ್ರಾಮದಲ್ಲಿ ಸರಣಿ ಮನೆ ಕಳ್ಳತನ ನಡೆದಿದ್ದು, ಎರಡು ಮನೆಗಳಿಗೆ ನುಗ್ಗಿದ ಕಳ್ಳರು ಲಕ್ಷಾಂತರ ರೂಪಾಯಿ ವೌಲ್ಯದ ನಗ-ನಗದನ್ನು ಕದ್ದೊಯ್ದಿದ್ದಾರೆ.
ಇಲ್ಲಿನ ಪೂರಿಂಗದ ಆದಂ ಹಾಜಿ ಎಂಬವರ ಮನೆಗೆ ನುಗ್ಗಿದ ಕಳ್ಳರು ಮನೆಯ ಕೋಣೆಯೊಳಗಿದ್ದ ಕಪಾಟಿನಿಂದ 2.12 ಲಕ್ಷ ರೂಪಾಯಿ ನಗದು ಹಾಗೂ ಮೂರೂವರೆ ಪವನ್ ಚಿನ್ನಾಭರಣ ಕಳವುಗೈದಿದ್ದಾರೆ.
ಈ ಮನೆಯಲ್ಲಿ ವಾರದ ಹಿಂದೆ ಆದಂ ಹಾಜಿಯವರ ಮಗನ ಮದುವೆ ಸಮಾರಂಭ ನಡೆದಿದ್ದು, ಮಂಗಳವಾರ ಕೂಡಾ ಈ ಮನೆಯಲ್ಲಿ ಮನೆಯವರು, ಬೀಗರು ಸೇರಿ ಒಟ್ಟು 15 ಜನರು ವಾಸ್ತವ್ಯವಿದ್ದರು. ತಡರಾತ್ರಿ 1 ಗಂಟೆಯವರೆಗೆ ಇವರು ಮನೆಯಲ್ಲಿ ಎಚ್ಚರದಿಂದಿದ್ದು, ಆ ಬಳಿಕ ಮಲಗಿದ್ದರು. ಆದರೆ ನಸುಕಿನ ಜಾವ 4 ಗಂಟೆಗೆ ಆದಂ ಹಾಜಿಯವರ ಮಗ ಬಾತ್‌ರೂಂಗೆ ಹೋಗಲೆಂದು ಎದ್ದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ.
ಆಶ್ಚರ್ಯವೆಂದರೆ ಮುಂಬಾಗಿಲ ಮೂಲಕ ಕಳ್ಳರು ಒಳಪ್ರವೇಶಿಸಿದ್ದರೂ, ಬಾಗಿಲು ಒಡೆದ ಕುರುಹುಗಳೇ ಇಲ್ಲಿ ಕಂಡುಬರುತ್ತಿಲ್ಲ. ಅದಲ್ಲದೆ, ರೂಂ ಒಳಗಿದ್ದ ಕಪಾಟನ್ನು ಕೂಡಾ ಒಡೆಯದೇ ಕೀಲಿ ಕೈ ಬಳಸಿ ಬಾಗಿಲು ತೆರೆದು ಕಳ್ಳತನ ನಡೆಸಲಾಗಿದೆ. ಅಲ್ಲದೇ, ಕಪಾಟನ್ನು ಇಡಲಾಗಿದ್ದ ಕೋಣೆಯಲ್ಲಿಯೇ ಮನೆಯೊಡತಿ, ಅವರ ಮಗಳು ಹಾಗೂ ಇಬ್ಬರು ನೆಂಟರು ಹೀಗೆ ನಾಲ್ವರು ಮಲಗಿದ್ದರು. ಆದರೂ ಇಲ್ಲಿ ಕಳ್ಳರು ತಮ್ಮ ಕೈಚಳಕ ತೋರಿಸಿರುವುದು ಅಚ್ಚರಿ ಮೂಡಿಸಿದೆ.
ಇನ್ನೊಂದು ಪ್ರಕರಣಕ್ಕೆ ಸಂಬಂಧಿಸಿ ಪೂರಿಂಗದಿಂದ ಸುಮಾರು ಅರ್ಧ ಕಿ.ಮೀ. ದೂರದಲ್ಲಿರುವ ಕೆಮ್ಮಾರದ ಬಡಿಲದ ಶಕ್ತಿನಗರದ ಝಬೈದಾ ಎಂಬವರ ಮನೆಗೂ ನಿನ್ನೆ ರಾತ್ರಿ ನುಗ್ಗಿದ ಕಳ್ಳರು 1.65 ಲಕ್ಷ ರೂ. ನಗದು ಹಾಗೂ 10 ಪವನ್ ಚಿನ್ನಾಭರಣವನ್ನು ದೋಚಿದ್ದಾರೆ.
ಝಬೈದಾ ಅವರ ಪತಿ ಅಬೂಬಕರ್ ವಿದೇಶದಲ್ಲಿ ಉದ್ಯೋಗದಲ್ಲಿದ್ದು, ಮನೆಯಲ್ಲಿದ್ದ ಝಬೈದಾ ಮಂಗಳವಾರ ಸಂಜೆ ಬಾಗಿಲು ಹಾಕಿ ತವರು ಮನೆಗೆ ತೆರಳಿದ್ದರು. ಆದ್ದರಿಂದ ಕಳ್ಳತನ ಸಂದರ್ಭ ಈ ಮನೆಯಲ್ಲಿ ಯಾರು ಇರಲಿಲ್ಲ. ಇವರ ಮುಂಬಾಗಿಲ ಚಿಲಕ ಮುರಿದು ಕಳ್ಳರು ಒಳಪ್ರವೇಶಿಸಿದ್ದು, ಕಪಾಟನ್ನು ಒಡೆದು ನಗ-ನಗದು ದೋಚಿದ್ದಾರೆ.
ಸರಣಿ ಕಳ್ಳತನದ ಸುದ್ದಿ ತಿಳಿದು ಸ್ಥಳಕ್ಕೆ ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕ ಅನಿಲ್ ಎಸ್. ಕುಲಕರ್ಣಿ ನೇತೃತ್ವದಲ್ಲಿ ಕಡಬ ಠಾಣಾ ಪೊಲೀಸರು, ಡಿವೈಎಸ್ಪಿಭಾಸ್ಕರ ರೈ, ಶ್ವಾನದಳ, ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.







