ಹೃದಯಾಘಾತಕ್ಕೀಡಾದ ಬಸ್ ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿದ ಭಾರೀ ದುರಂತ

ಜೈಪುರ್,ಎ.26 : ವಾಹನ ದಟ್ಟಣೆಯಿರುವ ರಸ್ತೆಯೊಂದರಲ್ಲಿ ಸಾಗುತ್ತಿದ್ದ ಬಸ್ ಒಂದರ ಚಾಲಕನೊಬ್ಬ ಹೃದಯಾಘಾತಕ್ಕೀಡಾದರೂ ತೀವ್ರ ನೋವಿನ ಹೊರತಾಗಿಯೂ ಪ್ರಸಂಗಾವಧಾನತೆ ಮೆರೆದು ವಾಹನವನ್ನು ಸುರಕ್ಷಿತವಾಗಿ ರಸ್ತೆ ಬದಿಯಲ್ಲಿ ನಿಲ್ಲಿಸಿ 40 ಮಂದಿ ಪ್ರಯಾಣಿಕರ ಪ್ರಾಣ ಕಾಪಾಡಿದ ಘಟನೆ ಮಂಗಳವಾರ ವರದಿಯಾಗಿದೆ. ಬಸ್ಸಿನಲ್ಲಿದ್ದ ಪ್ರಯಾಣಿಕರಲ್ಲಿ ಹೆಚ್ಚಿನವರು ಮಕ್ಕಳಾಗಿದ್ದರು.
ರಾಜಸ್ಥಾನದ ರಸ್ತೆ ಸಾರಿಗೆ ಬಸ್ ದುಂಗರಪುರದಿಂದ ಮಧ್ಯ ಪ್ರದೇಶದ ರತ್ಲಂ ಜಿಲ್ಲೆಯತ್ತ ಸಾಗುತ್ತಿದ್ದಾಗ ಘಟನೆ ನಡೆದಿದೆ. ದುಂಗರಪುರದ ಹತ್ತಿರದ ಬನಸ್ವಾರ ಪ್ರದೇಶವನ್ನು ಬಸ್ 11.30ರ ಸುಮಾರಿಗೆ ದಾಟುತ್ತಿದ್ದಂತೆಯೇ ಚಾಲಕ 50 ವರ್ಷದ ನವಾಝ್ ಬೇಗ್ ಗೆ ಎದೆಯಲ್ಲಿ ತೀವ್ರ ನೋವು ಕಾಣಿಸಿಕೊಂಡಿತ್ತು. ಆದರೆ ರಸ್ತೆಯಲ್ಲಿದ್ದ ಟ್ರಾಫಿಕ್ ದಟ್ಟಣೆಯನ್ನು ಗಮನಿಸಿ ಅಪಘಾತವನ್ನು ತಡೆಯುವ ಸಲುವಾಗಿ ಕಷ್ಟದಿಂದ ವಾಹನವನ್ನು ರಸ್ತೆ ಬದಿಗೆ ತಂದು ನಿಲ್ಲಿಸಿದ ನಂತರ ಬೇಗ್ ಸ್ಮೃತಿ ಕಳೆದುಕೊಂಡು ಬಿಟ್ಟಿದ್ದರು. ಕೂಡಲೇ ಅವರನ್ನು ಬಸ್ಸಿನ ನಿರ್ವಾಹಕ ಹಾಗೂ ಮತ್ತೊಬ್ಬರು ಪ್ರಯಾಣಿಕ ಆಟೋ ಒಂದರಲ್ಲಿ ಆಸ್ಪತ್ರೆಗೆ ಸಾಗಿಸಿದ್ದರು.
ಮರಳಿ ಸ್ಮೃತಿ ಬರುವಾಗ ಅವರಿಗೆ ಸಂಜೆಯಾಗಿತ್ತು. ಸುದೈವವಶಾತ್ ಬೇಗ್ ಅಪಾಯದಿಂದ ಪಾರಾಗಿದ್ದು ಬನಸ್ವರ ಸರಕಾರಿ ಆಸ್ಪತ್ರೆಯಲ್ಲಿ ಗುಣಮುಖರಾಗುತ್ತಿದ್ದಾರೆ. ಒಂದು ವೇಳೆ ಅವರು ವಾಹನದ ಮೇಲಿನ ಹಿಡಿತ ಕಳೆದುಕೊಂಡು ಅಪಘಾತ ಉಂಟಾಗಿದ್ದೇ ಆದಲ್ಲಿ ಪರಿಣಾಮ ಊಹಿಸಲಸಾಧ್ಯವಾಗುತ್ತಿತ್ತು.
ವಿವಾಹಿತರಾಗಿರುವ ಅವರಿಗೆ ನಾಲ್ಕು ಮಂದಿ ಮಕ್ಕಳಿದ್ದಾರೆ. ಹೃದ್ರೋಗಿಯಾಗಿರುವ ಅವರು ಇನ್ನೂ ಹೆಚ್ಚಿನ ಚಿಕಿತ್ಸೆಗಾಗಿ ಅಹ್ಮದಾಬಾದ್ ಗೆ ಹೋಗಬೇಕೆಂದಿದ್ದಾರೆ. ‘‘ನಾನು 38 ಬಾರಿ ರಕ್ತದಾನ ಮಾಡಿದ್ದೇನೆ. ನನ್ನಿಂದ ಸಹಾಯ ಪಡೆದ ಯಾರೊಬ್ಬರದ್ದಾದರೂ ಪ್ರಾರ್ಥನೆ ನನ್ನ ಪ್ರಾಣ ಕಾಪಾಡಿರಬಹುದು,’’ ಎನ್ನುತ್ತಾರೆ ಬೇಗ್.