ಮತದಾರರಿಂದ ತಲಾಖ್:ಬಿಜೆಪಿಯ ಎಲ್ಲ ಮುಸ್ಲಿಂ ಅಭ್ಯರ್ಥಿಗಳ ಸೋಲು
ದಿಲ್ಲಿ ಮುನಿಸಿಪಲ್ ಚುನಾವಣೆ

ಹೊಸದಿಲ್ಲಿ,ಎ.26: ದಿಲ್ಲಿ ಮಹಾನಗರ ಪಾಲಿಕೆ ಚುನಾವಣಾ ಫಲಿತಾಂಶಗಳು ಬುಧವಾರ ಪ್ರಕಟವಾಗಿವೆ. ಬಿಜೆಪಿಯು ಸ್ಪಷ್ಟ ಬಹುಮತವನ್ನು ಪಡೆದಿದೆಯಾದರೂ ಅದು ಕಣಕ್ಕಿಳಿಸಿದ್ದ ಎಲ್ಲ ಐವರೂ ಮುಸ್ಲಿಂ ಅಭ್ಯರ್ಥಿಗಳು ಸೋಲನ್ನಪ್ಪಿದ್ದಾರೆ. ಈ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಬಿಜೆಪಿಯು ಕೆದಕಿರುವ ತ್ರಿವಳಿ ತಲಾಖ್‌ನ ಪ್ರಭಾವವೂ ಈ ಸೋಲುಗಳಲ್ಲಿ ಕಂಡು ಬರುತ್ತಿದೆ ಮತ್ತು ಈ ಸೋಲುಗಳು ಬಿಜೆಪಿಯಲ್ಲಿ ಅಲ್ಪಂಖ್ಯಾತರ ಭವಿಷ್ಯದ ಬಗ್ಗೆ ಪ್ರಶ್ನೆಗಳನ್ನೆಬಿಸಿವೆ.
ಇತ್ತೀಚಿನ ಉತ್ತರ ಪ್ರದೇಶ ಚುನಾವಣೆಯಲ್ಲಿ ಬಿಜೆಪಿ ಒಬ್ಬನೇ ಒಬ್ಬ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನೀಡಿರಲಿಲ್ಲ. ಆದರೂ ಮುಸ್ಲಿಂ ಪ್ರಾಬಲ್ಯದ ಹಲವಾರು ಕ್ಷೇತ್ರಗಳನ್ನು ಅದು ಗೆದ್ದುಕೊಂಡಿತ್ತು. ಈ ಹಿನ್ನೆಲೆಯಲ್ಲಿ ಬಿಜೆಪಿ ದಿಲ್ಲಿ ಮಹಾನಗರ ಪಾಲಿಕೆಯ 272 ಸ್ಥಾನಗಳ ಪೈಕಿ ಐದರಲ್ಲಿ ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು.
ಝಾಕಿರ್ ನಗರದಿಂದ ಕುವರ್ ರಫಿ, ಚೌಹಾಣ ಬಾಂಗೇರ್‌ನಿಂದ ಸರ್ತಾಜ್ ಅಹ್ಮದ್, ಮುಸ್ತಫಾಬಾದ್‌ನಿಂದ ಸಬ್ರಾ ಮಲಿಕ್, ದಿಲ್ಲಿ ಗೇಟ್‌ನಿಂದ ಫಾಮುದ್ದೀನ್ ಸಫಿ ಮತ್ತು ಕುರೇಶಿ ನಗರದಿಂದ ರುಬೀನಾ ಬೇಗಂ ಅವರು ಬಿಜೆಪಿ ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ದರು.
ಝಾಕಿರ್ ನಗರದಲ್ಲಿ ಶೋಯೆಬ್ ದಾನಿಷ್, ಮುಸ್ತಫಾಬಾದ್‌ನಿಂದ ಪರ್ವೀನ್, ದಿಲ್ಲಿ ಗೇಟ್‌ನಿಂದ ಅಲಿ ಮುಹಮ್ಮದ್ ಇಕ್ಬಾಲ್ ಮತ್ತು ಕುರೇಶಿ ನಗರದಿಂದ ನೇಹಾ ಫಾತಿಮಾ (ಎಲ್ಲರೂ ಕಾಂಗ್ರೆಸ್) ಮತ್ತು ಚೌಹಾಣ ಬಾಂಗೇರ್‌ನಿಂದ ಅಬ್ದುಲ್ ರಹಮಾನ್ (ಆಪ್) ಗೆಲುವು ಸಾಧಿಸಿದ್ದಾರೆ.
ಈ ಪ್ರಮುಖ ಕ್ಷೇತ್ರಗಳಲ್ಲಿ ಬಿಜೆಪಿ ಸೋಲು ಕಂಡಿರುವುದಕ್ಕೆ ‘ತೋರಿಕೆಯ ರಾಷ್ಟ್ರೀಯವಾದಕ್ಕಾಗಿ ಅದರ ಹೋರಾಟ ’ಮತ್ತು ದೇಶಾದ್ಯಂತ ಮುಸ್ಲಿಮರ ಮೇಲೆ ಕೋಮು ಹಲ್ಲೆಗಳು ಕಾರಣವೆಂದು ಹೇಳಬಹುದಾಗಿದೆ ಎಂದು ಕಾಂಗ್ರೆಸ ವಕ್ತಾರ ಅಬ್ದುಲ್ ರಸೂಲ್ ಖಾನ್ ಹೇಳಿದರು.
ಪ್ರಧಾನಿ ನರೇಂದ್ರ ಮೋದಿಯವರು ಅಭಿವೃದ್ಧಿಯ ಬಗ್ಗೆ ಮಾತನಾಡುತ್ತಾರೆ, ಆದರೆ ಬಡವರನ್ನು ಥಳಿಸಲಾಗುತ್ತಿದೆ. ಅವರಿಗೆ (ಬಿಜೆಪಿ) ಮುಸ್ಲಿಮರು ಬೇಕಿಲ್ಲ ಎನ್ನುವುದನ್ನು ಅವರ ಕೃತ್ಯಗಳೇ ತೋರಿಸುತ್ತಿವೆ ಎಂದರು.
ಬಿಜೆಪಿಯು ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದ ಈ ಕ್ಷೇತ್ರಗಳು ಕಾಂಗ್ರೆಸ್‌ನ ಭದ್ರಕೋಟೆಗಳಾಗಿದ್ದವು. ಹೀಗಾಗಿ ಈ ಫಲಿತಾಂಶ ನಿರೀಕ್ಷಿತವೇ ಆಗಿತ್ತು. ಬಿಜೆಪಿ ಈ ಕ್ಷೇತ್ರಗಳಲ್ಲಿ ಮುಸ್ಲಿಂ ಅಭ್ಯರ್ಥಿಗಳನ್ನು ಕೇವಲ ತೋರಿಕೆಗಾಗಿ ನಿಲ್ಲಿಸಿತ್ತು ಎಂದು ಇನ್ನೋರ್ವ ಕಾಂಗ್ರೆಸ್ ವಕ್ತಾರ ಮುಹಮ್ಮದ್ ಅಲಿ ಖಾನ್ ಹೇಳಿದರು.
ಮುಸ್ಲಿಮರು ಬಿಜೆಪಿಗೆ ಮತ ಹಾಕುತ್ತಾರೆ ಎಂಬ ಕಲ್ಪನೆಯೇ ಆಧಾರರಹಿತವಾಗಿದೆ ಎಂದು ಹೆಸರು ಹೇಳಿಕೊಳ್ಳಲು ಬಯಸದ ಹಿರಿಯ ಆರೆಸ್ಸೆಸ್ ನಾಯಕರೋರ್ವರು ಹೇಳಿದರು. ಮುಸ್ಲಿಮರು ಎಂದೂ ಬಿಜೆಪಿಗೆ ಮತ ನೀಡುವುದಿಲ್ಲ ಎನ್ನುವುದಕ್ಕೆ ತನ್ನ ಬಳಿ ದತ್ತಾಂಶಗಳಿವೆ, ಹೀಗಿರುವಾಗ ದಿಲ್ಲಿ ಮಹಾನರ ಪಾಲಿಕೆ ಚುನಾವಣೆಯಲ್ಲಿ ಅವರು ಬಿಜೆಪಿಗೆ ಮತ ನೀಡಿದ್ದಾರೆ ಎಂದೇಕೆ ಭಾವಿಸಬೇಕು? ಶೇ.10 ರಷ್ಟು ಮುಸ್ಲಿಮರು ಬಿಜೆಪಿಗೆ ಮತ ನೀಡಿರಬಹುದು,ಆದರೆ ತಾವು ಹಾಗೇಕೆ ಮಾಡಿದ್ದೇವೆ ಎಂದು ಅವರು ಸ್ವತಃ ಪ್ರಶ್ನಿಸಿಕೊಳ್ಳಬೇಕು ಎಂದರು.