ಮಂಗಳೂರಿಗೆ ಎ.27ರಿಂದ ದಿನನಿತ್ಯ ನೀರು ಪೂರೈಕೆ: ಮೇಯರ್

ಮಂಗಳೂರು, ಎ.26: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಎ.27ರಿಂದ ಪ್ರತಿದಿನ ನೀರು ಪೂರೈಕೆ ಮಾಡಲಾಗುವುದು ಎಂದು ಮೇಯರ್ ಕವಿತಾ ಸನಿಲ್ ಹೇಳಿದ್ದಾರೆ.
ಬುಧವಾರ ತನ್ನ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಈವರೆಗೆ ನೀರು ಪೂರೈಕೆಯಲ್ಲಿ ಒಂದಷ್ಟು ವ್ಯತ್ಯಯವಾಗಿತ್ತು. ಸಮಸ್ಯೆಯನ್ನು ಅರ್ಥ ಮಾಡಿಕೊಂಡ ಜನತೆ ಸಹಕರಿಸಿ ಮನಪಾ ಆಡಳಿತದ ಜೊತೆ ಕೈ ಜೋಡಿಸಿತ್ತು. ಇದೀಗ ಎಎಂಆರ್‌ನಿಂದ ತುಂಬೆಗೆ ನೀರು ಸರಬರಾಜು ಮಾಡಲಾಗಿದೆ. ಎಎಂಆರ್‌ನಲ್ಲಿ 4.49 ಮೀ. ನೀರಿದ್ದು, ತುಂಬೆಯಲ್ಲಿ ಈಗ 4.22 ಮೀ.ನೀರಿದೆ. ಎ.27ರ ಮುಂಜಾನೆಯ ವೇಳೆಗೆ ತುಂಬೆ ಡ್ಯಾಂನಲ್ಲಿ 5 ಮೀ. ನೀರು ನಿಲ್ಲಲಿದೆ. ಹಾಗಾಗಿ ಮೇವರೆಗೆ ನೀರು ಪೂರೈಕೆಗೆ ಯಾವುದೇ ಸಮಸ್ಯೆಯಾಗದು ಎಂದರು.
6 ಕೋ.ರೂ. ನೀರಿನ ಬಿಲ್ ಬಾಕಿ: ಸುರತ್ಕಲ್‌ನ 1ರಿಂದ 11ನೆ ವಾರ್ಡ್‌ವರೆಗಿನ 19,668 ನೀರು ಸಂಪರ್ಕದ ಪೈಕಿ ಸುಮಾರು 5,24,70,943 ಕೋ.ರೂ. ನೀರಿನ ಬಿಲ್ ಬಾಕಿ ಇದೆ. ಅದೇ ರೀತಿ ಉಳ್ಳಾಲ ನಗರಸಭೆಯಿಂದ ಸುಮಾರು 50 ಲಕ್ಷ ರೂ., ಮುಲ್ಕಿ ಪಟ್ಟಣ ಪಂಚಾಯತ್‌ನಿಂದ 76,56,705 ಲಕ್ಷ.ರೂ., ಚೇಳಾಯಾರು ಗ್ರಾಪಂನಿಂದ 5,05,000 ಲ.ರೂ., ಬಾಳ ಗ್ರಾಪಂನಿಂದ ಸುಮಾರು 18 ಲಕ್ಷ ರೂ. ಬಿಲ್ ಬಾಕಿ ಇದೆ ಎಂದು ಮೇಯರ್ ಕವಿತಾ ಸನಿಲ್ ನುಡಿದರು.
ಸಂಸದರ ಆರೋಪಕ್ಕೆ ನೋ ಕಮೆಂಟ್ಸ್: ನಗರ ಪಾಲಿಕೆ ವ್ಯಾಪ್ತಿಯ ಒಳಚರಂಡಿ ಕಾಮಗಾರಿಯಲ್ಲಿ ಅವ್ಯವಹಾರವಾಗಿದ್ದು, ಈ ಬಗ್ಗೆ ಲೋಕಾಯುಕ್ತಕ್ಕೆ ದೂರು ನೀಡಲಾಗುವುದು ಎಂದು ಸಂಸದ ನಳಿನ್ ಕುಮಾರ್ ಕಟೀಲ್‌ರ ಆರೋಪಕ್ಕೆ ಮೇಯರ್ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. ಪತ್ರಕರ್ತರು ಈ ಬಗ್ಗೆ ಪ್ರಶ್ನಿಸಿದಾಗ ‘ನೋ ಕಮೆಂಟ್ಸ್ ನೋ ಕಮೆಂಟ್ಸ್’ ಎನ್ನುತ್ತಾ ಸುಮ್ಮನಾದರು.
ಸುದ್ದಿಗೋಷ್ಠಿಯಲ್ಲಿ ಉಪಮೇಯರ್ ರಜನೀಶ್ ಕಾಪಿಕಾಡ್, ಆಯುಕ್ತ ಮುಹಮ್ಮದ್ ನಝೀರ್, ಮನಪಾ ಸಚೇತಕ ಶಶಿಧರ ಹೆಗ್ಡೆ, ಸ್ಥಾಯಿ ಸಮಿತಿಯ ಅಧ್ಯಕ್ಷೆ ಸಬಿತಾ ಮಿಸ್ಕಿತ್ ಉಪಸ್ಥಿತರಿದ್ದರು.







