ದ.ಕ.: 15 ದಿನಗಳೊಳಗೆ ನಿರುಪಯುಕ್ತ ಬೋರ್‌ವೆಲ್ ಮುಚ್ಚಲು ನಿರ್ದೇಶನ

ಮಂಗಳೂರು, ಎ. 26: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿರುವ ಎಲ್ಲಾ ನಿರುಪಯುಕ್ತ ಕೊಳವೆ ಬಾವಿ (ಬೋರ್‌ವೆಲ್)ಗಳನ್ನು 15 ದಿನಗಳೊಳಗೆ ಮುಚ್ಚುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಎಂ.ಆರ್. ರವಿ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ದ.ಕ. ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಈ ನಿರ್ದೇಶನ ನೀಡಿದ ಅವರು, ಇದೇ ಅವಧಿಯಲ್ಲಿ ಆಯಾ ತಾಲೂಕುಗಳಲ್ಲಿರುವ ಖಾಸಗಿ ಹಾಗೂ ಸಾರ್ವಜನಿಕ ಕೊಳವೆ ಬಾವಿಗಳ ಸಮಗ್ರ ಪಟ್ಟಿಯನ್ನು ಜಿಲ್ಲಾ ಪಂಚಾಯತ್‌ಗೆ ಒದಗಿಸುವಂತೆ ಸೂಚನೆ ನೀಡಿದರು. ತುರ್ತು ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಜಿಪಂನಾದ್ಯಂತ ಗ್ರಾಮ ಮಟ್ಟಗಳಲ್ಲಿ ಬೋರ್‌ವೆಲ್‌ಗಳನ್ನು ಕೊರೆಸಲಾಗುತ್ತಿದೆ. ಆದರೆ ಬಹುತೇಕ ಬೋರ್‌ವೆಲ್‌ಗಳಲ್ಲಿ ನೀರು ಸಿಗುವುದಿಲ್ಲ. ಹಾಗಿದ್ದರೂ ಅವುಗಳನ್ನು ಮುಚ್ಚುವ ಕಾರ್ಯ ಸಮರ್ಪಕವಾಗಿ ಆಗುತ್ತಿಲ್ಲ. ಇದರಿಂದ ಮುಂದೊಂದು ದಿನ ಜಿಲ್ಲೆಯಲ್ಲಿ ಅಪಾಯದ ಪರಿಸ್ಥಿತಿ ನಿರ್ಮಾಣವಾಗಬಹುದು ಎಂದು ಸದಸ್ಯರಾದ ಮಂಜುಳಾ ಮಾವೆ, ಎಂ.ಎಸ್. ಮುಹಮ್ಮದ್, ಶಯನಾ ಜಯಾನಂದ, ಕೊರಗಪ್ಪ ನಾಯ್ಕ ಸೇರಿದಂತೆ ಸದಸ್ಯರನೇಕರು ಸಭೆಯಲ್ಲಿ ಆತಂಕ ವ್ಯಕ್ತಪಡಿಸಿದರು.
ಜಿಲ್ಲಾ ಪಂಚಾಯತ್ ವ್ಯಾಪ್ತಿಗೆ ಒಬ್ಬರೇ ಜಿಯಾಲಜಿಸ್ಟ್ ಇರುವುದರಿಂದಲೂ ಜಿಲ್ಲೆಯಾದ್ಯಂತ ಕೊಳವೆ ಬಾವಿ ಮೂಲಕ ನೀರನ್ನು ಒದಗಿಸಲು ಸಮಸ್ಯೆಯಾಗುತ್ತಿದೆ ಎಂಬ ಆಕ್ಷೇಪವೂ ಸಭೆಯಲ್ಲಿ ಸದಸ್ಯರಿಂದ ವ್ಯಕ್ತವಾಯಿತು.
ಈ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಎಂ. ಆರ್. ರವಿ, ಬೋರ್‌ವೆಲ್ ಕೊರೆಸುವುದು ಸರಕಾರದ ಆದ್ಯತೆಯಲ್ಲ. ಇದರಿಂದ ಅಂತರ್ಜಲ ಕುಸಿಯುವ ಭೀತಿ ಇರುವುದರಿಂದ ನೀರಿನ ಸಮಸ್ಯೆ ನಿವಾರಣೆಗೆ ಪರ್ಯಾಯ ಕ್ರಮಗಳನ್ನು ಅನುಸರಿಸಲಾಗುತ್ತಿದೆ. ಪುತ್ತೂರು ತಾಲೂಕಿನಲ್ಲಿ ಬೋರ್‌ವೆಲ್ ಕೊರೆಯಲು ಈಗಲೂ ನಿಷೇಧವಿದೆ. ಇಲ್ಲಿ ಅಂತರ್ಜಲ ಮಟ್ಟ ಶೇ. 90ರಷ್ಟು ಅತಿಯಾಗಿ ಬಳಕೆಯಾಗಿರುವ ಕಾರಣ ಅಪಾಯದ ಮುನ್ಸೂಚನೆ ಇದೆ. ಬೆಳ್ತಂಗಡಿ ಮತ್ತು ಸುಳ್ಯ ತಾಲೂಕಿನಲ್ಲೂ ಇದೀಗ ಆತಂಕದ ಮಟ್ಟವನ್ನು ತಲುಪಿದೆ. ಆದರೆ ತುರ್ತು ಸಂದರ್ಭಗಳಲ್ಲಿ ಟಾಸ್ಕ್‌ಪೋರ್ಸ್‌ನಡಿ ಕೊಳವೆ ಬಾವಿ ಕೊರೆಯಲು ಅವಕಾಶ ಕಲ್ಪಿಸಲಾಗಿದೆ. ಈ ನಿಟ್ಟಿನಲ್ಲಿ ಜಿಲ್ಲೆಗೆ ಇಬ್ಬರು ಹೆಚ್ಚುವರಿ ಜಿಯಾಲಜಿಸ್ಟ್‌ಗಳ ಸೇವೆಯನ್ನು ಬಳಸಲು ಅವಕಾಶ ನೀಡಲಾಗಿದೆ. ಹಾಗಾಗಿ ಅನಗತ್ಯ ಬೋರ್‌ವೆಲ್ ಕೊರೆಯಲು ಅವಕಾಶ ಕಲ್ಪಿಸುವುದು ಬೇಡ ಎಂದು ಅವರು ಸಭೆಯಲ್ಲಿ ಮನವಿ ಮಾಡಿದರು.
ಅನಧಿಕೃತವಾಗಿ ಬೋರ್‌ವೆಲ್‌ಗಳನ್ನು ಕೊರೆಯುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಗ್ರಾಪಂನಲ್ಲಿ ಪಿಡಿಒಗಳಿಂದ ಪೂರ್ವಾನುಮತಿ ಪಡೆಯಲು ಸೂಚನೆ ನೀಡಲಾಗಿದೆ. ಖಾಸಗಿಯಾಗಿ ಅಥವಾ ಸಾರ್ವಜನಿಕವಾಗಿ ಬೋರ್‌ವೆಲ್ ಕೊರೆದು ಅದನ್ನು ಮುಚ್ಚದ ಪ್ರಕರಣಗಳಿದ್ದಲ್ಲಿ ಮಾಲಕರು ಅಥವಾ ಸಂಬಂಧಪಟ್ಟವರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಲು ಕೂಡಾ ನಿರ್ದೇಶನ ನೀಡಲಾಗಿದೆ ಎಂದು ಡಾ.ಎಂ.ಆರ್. ರವಿ ತಿಳಿಸಿದರು.
ದ.ಕ. ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ 5,150 ಸಾರ್ವಜನಿಕ ಬೋರ್‌ವೆಲ್‌ಗಳು ಹಾಗೂ 33,000ಕ್ಕೂ ಅಧಿಕ ಖಾಸಗಿ ಬೋರ್‌ವೆಲ್‌ಗಳಿರುವ ಮಾಹಿತಿ ಇದೆ ಎಂದು ಜಿ.ಪಂ. ಉಪ ಕಾರ್ಯದರ್ಶಿ ಉಮೇಶ್ ಸಭೆಗೆ ಮಾಹಿತಿ ನೀಡಿದರು.
ಕುಡಿಯುವ ನೀರು: ಹಣವಿದ್ದರೂ ಖರ್ಚಾಗುತ್ತಿಲ್ಲ!
ತುರ್ತು ಕುಡಿಯುವ ನೀರು ಸರಬರಾಜು ಕಾಮಗಾರಿಗಳ ಪಟ್ಟಿಯನ್ನು ನೀಡಲು ಸೂಚಿಸಿರುವ ಹಿನ್ನೆಲೆಯಲ್ಲಿ ಕೇವಲ 8 ಮಂದಿ ಸದಸ್ಯರಿಂದ ಮಾತ್ರ ಪಟ್ಟಿ ಸಲ್ಲಿಕೆಯಾಗಿರುವ ಕುರಿತು ಕಾರ್ಯಸೂಚಿಯಲ್ಲಿ ತಿಳಿಸಲಾದ ಕುರಿತು ಸಭೆಯಲ್ಲಿ ಸದಸ್ಯರಿಂದ ತೀವ್ರ ಆಕ್ಷೇಪ ವ್ಯಕ್ತವಾಯಿತು. ಎಂ.ಎಸ್. ಮುಹಮ್ಮದ್ ಈ ವಿಷಯ ಪ್ರಸ್ತಾಪಿಸಿ, ಪಟ್ಟಿ ಒದಗಿಸಿದವರಿಗಾದರೂ ಕಾಮಗಾರಿಗೆ ಅನುದಾನ ಬಿಡುಗಡೆ ಮಾಡುವ ಮೂಲಕ ನೀರಿನ ಸಮಸ್ಯೆ ಪರಿಹಾರಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದರು.
ಈಗಾಗಲೇ ಎರಡೆರಡು ಬಾರಿ ಪಟ್ಟಿ ನೀಡಲಾಗಿದ್ದರೂ ಪಟ್ಟಿ ನೀಡಿಲ್ಲ ಎಂದು ಹೇಳುವುದು ಹಾಸ್ಯಾಸ್ಪದ ಎಂದು ಸದಸ್ಯರನೇಕರು ಸಭೆಯಲ್ಲಿ ಆಕ್ಷೇಪಿಸಿದರು. ಈ ಬಗ್ಗೆ ಸಿಇಒ ಅಧಿಕಾರಿಯನ್ನು ವಿಚಾರಿಸಿದಾಗ, ಕಾರ್ಯಸೂಚಿ ಕೆಲ ದಿನಗಳ ಹಿಂದೆ ಸಿದ್ಧವಾಗಿರುವಂತದ್ದು. ಇಂದಿನ ಮಾಹಿತಿ ಪ್ರಕಾರ 17 ಮಂದಿ ಪಟ್ಟಿ ಒದಗಿಸಿದ್ದಾರೆ ಎಂದು ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಿಇಒ, ಸಂಜೆಯೊಳಗೆ ಬಾಕಿ ಇರುವವರೂ ಪಟ್ಟಿ ಒದಗಿಸಿದರೆ, ಅನುದಾನಕ್ಕಾಗಿ ಪ್ರಸ್ತಾಪವನ್ನು ಸರಕಾರಕ್ಕೆ ಸಲ್ಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು. ಕುಡಿಯುವ ನೀರಿಗೆ ಸಂಬಂಧಿಸಿ ವಿವಿಧ ಮೂಲಗಳಿಂದ ಒಟ್ಟು 950 ಲಕ್ಷ ರೂ. ಬಿಡುಗಡೆಯಾಗಿದ್ದು, 355 ಲಕ್ಷ ರೂ. ಮಾತ್ರ ಖರ್ಚಾಗಿದೆ ಎಂದು ಅವರು ಹೇಳಿದರು.
ದೀನ್ ದಯಾಳ್ ಯೋಜನೆ: ಬಿಪಿಎಲ್‌ನವರಿಗೆ ಸಂಪೂರ್ಣ ಉಚಿತ!: ದೀನ್ ದಯಾಳ್ ಯೋಜನೆಯಡಿ ವಿದ್ಯುತ್ ಒದಗಿಸುವ ಸಲುವಾಗಿ ಗುತ್ತಿಗೆದಾರರು ಬಡ ಕುಟುಂಬಗಳಿಂದ ಮೂರರಿಂದ ಆರು ಸಾವಿರ ರೂ.ಗಳನ್ನು ಪಡೆಯುತ್ತಿದ್ದಾರೆ ಎಂಬ ಆರೋಪವನ್ನು ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಅವರೇ ಸಭೆಯ ಮುಂದಿಟ್ಟರು.
ಮೆಸ್ಕಾಂ ಅಧಿಕಾರಿ ಮಾಹಿತಿ ನೀಡುತ್ತಾ, ಈ ಯೋಜನೆಯಡಿ ಮುಂದಿನ ತಿಂಗಳಿನಿಂದಷ್ಟೇ ವಿದ್ಯುತ್ ಸಂಪರ್ಕದ ಕಾಮಗಾರಿ ಆರಂಭವಾಗಲಿದೆ. ವಿದ್ಯುತ್ ಸಂಪರ್ಕಕ್ಕೆ ಸಿಬ್ಬಂದಿ ಮನೆಗಳಿಗೆ ಭೇಟಿ ನೀಡುವ ಸಂದರ್ಭ ಮನೆಗಳವರು ಬಿಪಿಎಲ್ ಕಾರ್ಡ್ ಹೊಂದಿರುವುದು ಕಡ್ಡಾಯ. ಉಳಿದಂತೆ ಮನೆಗೆ ಸಂಪೂರ್ಣ ವಯರಿಂಗ್ ನಡೆಸಿ, ಮೀಟರ್ ಖರೀದಿಸಿ, ಕಂಬ ಹಾಕಿ ವಿದ್ಯುತ್ ಸಂಪರ್ಕ ಒದಗಿಸಲಾಗುವುದು. ಬಿಪಿಎಲ್ ಕಾರ್ಡ್ ಹೊಂದಿರುವ ಯಾರೂ ಹಣ ಯಾವುದೇ ರೀತಿಯಲ್ಲಿ ಹಣ ಪಾವತಿಸುವ ಅಗತ್ಯವಿರುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಕೇಂದ್ರ ಸರಕಾರದ ರಾಜೀವ್‌ಗಾಂಧಿ ವಿದ್ಯುದೀಕರಣ ಯೋಜನೆಯನ್ನು ದೀನ್ ದಯಾಳ್ ಆಗಿ ಪರಿವರ್ತಿಸಲಾಗಿದೆ. ಇದರಿಂದ ಬಿಪಿಎಲ್‌ದಾರರಿಗೆ ಪ್ರಯೋಜನವಾಗಲಿದೆ. ಯೋಜನೆಗಾಗಿ ಈಗಾಗಲೇ ಬಿಪಿಎಲ್ ಕಾರ್ಡುದಾರರ ಪಟ್ಟಿಯನ್ನು ತಯಾರಿಸಲಾಗಿದೆ. ಆದರೆ ಆ ಪಟ್ಟಿಯಿಂದ ಬಿಟ್ಟು ಹೋಗಿರುವ ಅರ್ಹರಿಗೂ ಯೋಜನೆಯ ಪ್ರಯೋಜನ ಒದಗಿಸಬೇಕು. ಈ ಬಗ್ಗೆ ಗ್ರಾ.ಪಂ. ಮಟ್ಟದಲ್ಲಿ ಮೆಸ್ಕಾಂ ಸಭೆ ಕರೆದು ಕ್ರಮ ಕೈಗೊಳ್ಳಬೇಕು ಎಂದು ಸದಸ್ಯೆ ಮಮತಾ ಗಟ್ಟಿ ಒತ್ತಾಯಿಸಿದರು.
ಸಭೆಯಲ್ಲಿ ಜಿ.ಪಂ. ಉಪಾಧ್ಯಕ್ಷೆ ಕಸ್ತೂರಿ ಪಂಜ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಆಶಾ ತಿಮ್ಮಪ್ಪ ಗೌಡ, ಸರ್ವೋತ್ತಮ ಗೌಡ ಉಪಸ್ಥಿತರಿದ್ದರು.
1,000 ಕಿಂಡಿ ಅಣೆಕಟ್ಟು ಗುರಿ: 2 ಪೂರ್ಣ
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ "ಜಲಧಾರಾ" ಕಾರ್ಯಕ್ರಮದಡಿ 1,000 ಕಿಂಡಿ ಅಣೆಕಟ್ಟುಗಳನ್ನು ನಿರ್ಮಿಸುವ ಗುರಿ ಹೊಂದಲಾಗಿದೆ. ಅದರಲ್ಲಿ ಈಗಾಗಲೇ 497 ಕಡೆ ಜಾಗ ಗುರುತಿಸಲಾಗಿದೆ. 356 ಯೋಜನೆಗಳ ಅಂದಾಜುಪಟ್ಟಿ ತಯಾರಿಸಲಾಗಿದ್ದು, 213 ಕಡೆ ಕಿಂಡಿ ಅಣೆಕಟ್ಟುಗಳ ಕಾಮಗಾರಿ ಆರಂಭಗೊಂಡಿದೆ. ಅದರಲ್ಲಿ 2 ಕಡೆ ಕಾಮಗಾರಿ ಪೂರ್ಣಗೊಂಡಿದೆ ಎಂದು ಸಭೆಯಲ್ಲಿ ವೀಡಿಯೋ ಕ್ಲಿಪ್ಲಿಂಗ್ ಮೂಲಕ ಮಾಹಿತಿ ಒದಗಿಸಲಾಯಿತು.







