ರೈತರ ನಿರ್ನಾಮಕ್ಕೆ ಮುಂದಾಗಿರುವ ಕೇಂದ್ರ ಸರಕಾರ: ಎಚ್.ಡಿ.ಕುಮಾರಸ್ವಾಮಿ

ಬೆಂಗಳೂರು, ಎ.26: ರೈತರು ಬೆಳೆಯುವಂತಹ ಬೆಳೆಗೆ ಸೇವಾ ಶುಲ್ಕ ವಿಧಿಸಲು ಮುಂದಾಗಿರುವ ಪ್ರಧಾನಿ ನರೇಂದ್ರಮೋದಿ ನೇತೃತ್ವದ ಕೇಂದ್ರ ಸರಕಾರದ ಕ್ರಮ ಅತ್ಯಂತ ಖಂಡನೀಯ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಬುಧವಾರ ಬೆಳ್ಳೂರು ಕ್ರಾಸ್‌ನಲ್ಲಿರುವ ಆದಿಚುಂಚನಗಿರಿ ಮಠದಲ್ಲಿ ಕಾಲಭೈರವೇಶ್ವರ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ನರೇಂದ್ರಮೋದಿ ನೇತೃತ್ವದ ಬಿಜೆಪಿ ಸರಕಾರ ಇರುವುದೇ ದೇಶದ ರೈತರನ್ನು ನಿರ್ನಾಮ ಮಾಡಲು. ರೈತರು ಬೆಳೆಯುವಂತಹ ಬೆಳೆಗೆ ಸೇವಾ ಶುಲ್ಕ ವಿಧಿಸಲು ಮುಂದಾಗುತ್ತಿರುವುದು ಸರಿಯಾದ ಬೆಳವಣಿಗೆಯಲ್ಲ ಎಂದು ಅವರು ಹೇಳಿದರು.
ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ)ಯನ್ನು ನಮ್ಮ ರಾಜ್ಯ ಸರಕಾರ ಯಾವ ಕಾರಣಕ್ಕೆ ಒಪ್ಪಿಕೊಂಡಿದ್ದೆಯೋ ಗೊತ್ತಿಲ್ಲ. ಜಿಎಸ್‌ಟಿ ದೇಶದಲ್ಲಿ ಅನುಷ್ಠಾನಕ್ಕೆ ಬಂದ ನಂತರ ಕೇಂದ್ರ ಸರಕಾರದ ಎದುರು ನಾವು ಭಿಕ್ಷುಕರಾಗಿ ನಿಲ್ಲಬೇಕು. ರಾಜ್ಯದ ಮುಖ್ಯಮಂತ್ರಿಯ ಸ್ಥಿತಿಯು ನಗರ ಪಾಲಿಕೆಯ ಅಧ್ಯಕ್ಷನಿಗಿಂತ ಕೆಟ್ಟ ಪರಿಸ್ಥಿತಿ ಆಗಲಿದೆ ಎಂದು ಕುಮಾರಸ್ವಾಮಿ ಎಚ್ಚರಿಕೆ ನೀಡಿದರು.
ಎರಡು ರಾಷ್ಟ್ರೀಯ ಪಕ್ಷಗಳು ರಾಜ್ಯದ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ವಿಫಲವಾಗಿರುವುದರಿಂದ ರಾಜ್ಯದ ಜನತೆಯಲ್ಲಿ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎಂಬ ಭಾವನೆಯಿದೆ. ರೈತರ ಸಾಲ ಮನ್ನಾ, ಯುವಕರಿಗೆ ಉದ್ಯೋಗ ಸೃಷ್ಟಿ, ಮೂಲಭೂತಸೌಕರ್ಯಗಳ ವೃದ್ಧಿ, ನೀರಾವರಿ ಸೌಲಭ್ಯಗಳಿಗೆ ಆದ್ಯತೆ ನೀಡುವುದು ನಮ್ಮ ಗುರಿ ಎಂದು ಕುಮಾರಸ್ವಾಮಿ ಹೇಳಿದರು.
"ಭಿನ್ನಮತೀಯ ಶಾಸಕರ ಬಗ್ಗೆ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಅವರ ದಾರಿ ಅವರಿಗೆ, ನನ್ನ ದಾರಿ ನನಗೆ. ಧರ್ಮಸ್ಥಳದಲ್ಲಿ ಪ್ರಮಾಣ ಮಾಡಲು ನನಗೆ ಈ ಹಿಂದೆ ಯಡಿಯೂರಪ್ಪ, ಶೋಭಾ ಕರಂದ್ಲಾಜೆ ಆಹ್ವಾನಿಸಿದ್ದರು. ಅದರಂತೆ ನಾನು ಹೋಗಿ ಸತ್ಯವನ್ನು ನುಡಿದೆ. ಯಡಿಯೂರಪ್ಪ ಅಧಿಕಾರ ಕಳೆದುಕೊಂಡರು" ಎಂದರು.
"ಭಿನ್ನಮತೀಯ ಶಾಸಕರ ಮುಖ ನೋಡಲು ನನಗೆ ಇಷ್ಟವಿಲ್ಲ. ಕಳೆದ 10 ವರ್ಷಗಳಲ್ಲಿ ಅವರು ಸಾಕಷ್ಟು ಬೆಳೆದಿದ್ದಾರೆ. ಆದುದರಿಂದ, ಇನ್ನು ಮುಂದೆ ಮಾಧ್ಯಮ ಸ್ನೇಹಿತರು ಅವರ ಬಗ್ಗೆ ಪ್ರಶ್ನೆ ಕೇಳದೆ, ರಾಜ್ಯದಲ್ಲಿರುವ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡುವುದು ಸೂಕ್ತ" ಎಂದು ಅವರು ಅಭಿಪ್ರಾಯಪಟ್ಟರು.
ಮಾಜಿ ಶಾಸಕ ಎಲ್.ಆರ್.ಶಿವರಾಮೇಗೌಡ ಮಾತನಾಡಿ, ಭಿನ್ನಮತೀಯ ಶಾಸಕರು ಯಾವ ಕಾರಣಕ್ಕೆ ಅಧಿಕೃತ ಅಭ್ಯರ್ಥಿಯ ವಿರುದ್ಧ ಮತ ಚಲಾಯಿಸಿದ್ದಾರೆ ಎಂಬುದು ನಮಗೆ ಗೊತ್ತು. ಎಷ್ಟು ಹಣಕಾಸಿನ ವ್ಯವಹಾರ ನಡೆದಿದೆ ಎಂಬುದರ ಕುರಿತು ಧರ್ಮಸ್ಥಳದಲ್ಲಿರುವ ಅಣ್ಣಪ್ಪ ಸ್ವಾಮಿ ಎದುರು ಪ್ರಮಾಣಕ್ಕೆ ದಿನಾಂಕ ಹಾಗೂ ಸಮಯ ನಿಗದಿಪಡಿಸಲಿ ನಾವೇ ಪ್ರಮಾಣ ಮಾಡಲು ಬರುತ್ತೇವೆ ಎಂದರು.







