ಶಿವಮೊಗ್ಗ: ಸಬ್ ಇನ್ಸ್‌ಪೆಕ್ಟರ್‌ನಿಂದ ಕಿರುಕುಳ; ಗ್ರಾಮಸ್ಥರಿಂದ ಪ್ರತಿಭಟನೆ
ಶಿವಮೊಗ್ಗ, ಎ.26: ಶಿವಮೊಗ್ಗ ಗ್ರಾಮಾಂತರ ಠಾಣೆ ಸಬ್ ಇನ್ಸ್‌ಪೆಕ್ಟರ್ ಮತ್ತು ರೈಟರ್, ಕೋಟೆಗಂಗೂರು ಗ್ರಾಮಸ್ಥರಿಗೆ ಅನಗತ್ಯ ಕಿರುಕುಳ ನೀಡಿ ಸುಳ್ಳು ಕೇಸ್ ದಾಖಲಿಸುತ್ತಿದ್ದಾರೆ ಎಂದು ಆರೋಪಿಸಿ ಬುಧವಾರ ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಮುಂಭಾಗ ಗ್ರಾಮಸ್ಥರು ಪ್ರತಿಭಟನೆ ನಡೆಸಿ, ಜಿಲ್ಲಾ ರಕ್ಷಣಾಧಿಕಾರಿಗೆ ಮನವಿ ಪತ್ರ ಅರ್ಪಿಸಿದರು.
ಈ ಹಿಂದೆ ಕೋಟೆಗಂಗೂರು ಗ್ರಾಮವನ್ನು ಪೊಲೀಸ್ ಇಲಾಖೆ ದತ್ತು ಪಡೆದುಕೊಂಡು, ಸರ್ವಾಂಗೀಣ ಅಭಿವೃದ್ಧಿಗೆ ಮುಂದಾಗಿತ್ತು. ಇದೀಗ ಆ ಗ್ರಾಮದ ಬಡವರು, ಕೂಲಿ ಕಾರ್ಮಿಕರು, ರೈತರಿಗೆ ಪೊಲೀಸರು ವಿನಾಕಾರಣ ತೊಂದರೆ ಕೊಡುತ್ತಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಯಾವುದೇ ದೂರು ನೀಡಲು ಹೋದರೂ ಪಿಎಸ್‌ಐ ಮತ್ತು ರೈಟರ್‌ರವರು ಸ್ಪಂದಿಸುತ್ತಿಲ್ಲ. ಯಾವುದೇ ಘಟನೆ ನಡೆಯದಿದ್ದರೂ ದೂರುದಾರರನ್ನೇ ಆರೋಪಿಗಳನ್ನಾಗಿ ಮಾಡಿಕೊಂಡು ಅವರ ವಿರುದ್ಧ ಅರ್ಜಿ ಪಡೆದು ಬಡ ಕೂಲಿ ಕಾರ್ಮಿಕರ ಮೇಲೆ ಸುಳ್ಳು ಕೇಸ್ ದಾಖಲಿಸುತ್ತಿದ್ದಾರೆ. ಬೆದರಿಕೆ ಹಾಕಿ ಹಲ್ಲೆ ನಡೆಸುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಗ್ರಾಮಸ್ಥರು ಈ ಬಗ್ಗೆ ಪ್ರಶ್ನಿಸಿದರೆ ಅವರನ್ನು ಕೂಡ ತಪ್ಪಿತಸ್ಥರನ್ನಾಗಿ ಮಾಡುವ ಬೆದರಿಕೆ ಹಾಕಲಾಗುತ್ತಿದೆ. ಗೋಪಿನಾಯ್ಕ ಎಂಬ ದಿನಗೂಲಿ ಕಾರ್ಮಿಕನಿಗೆ ಶಿವಮೊಗ್ಗ ಕೆಲವು ಯುವಕರು ಹಲ್ಲೆ ನಡೆಸಿದ್ದು ಈ ಬಗ್ಗೆ ಪ್ರಕರಣ ದಾಖಲಾಗಿದೆ. ಗೋಪಿನಾಯ್ಕ ಆಸ್ಪತ್ರೆಗೆ ದಾಖಲಾಗಿದ್ದಾನೆ. ಆದರೆ ಗ್ರಾಮಾಂತರ ಪಿಎಸ್‌ಐರವರು ಹಲ್ಲೆ ನಡೆಸಿದ ಹುಡುಗರಿಂದ ಹಣ ಪಡೆದು ಯಾವುದೇ ದೂರು ದಾಖಲಿಸದೇ ಬಿಟ್ಟು ಕಳುಹಿಸಿದ್ದಾರೆ. ಈ ಬಗ್ಗೆ ಕೇಳಲು ಹೋದ ಗ್ರಾಮಸ್ಥರ ಮೇಲೆ ಸುಳ್ಳು ಕೇಸ್ ದಾಖಲಿಸಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಬಡವರು, ಕೂಲಿ ಕಾರ್ಮಿಕರಿಗೆ ಕಿರುಕುಳ ನೀಡುತ್ತಿರುವ ಸಬ್ ಇನ್ಸ್‌ಪೆಕ್ಟರ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.







