ಮಹಾರಾಣಾ ಪ್ರತಾಪ್ ಭಿಲ್ಲನೆಂದು ಹೇಳಿದ್ದ ರಾಜಸ್ಥಾನದ ದಲಿತ ಲೇಖಕಿಗೆ ಬೆದರಿಕೆ

ಜೈಪುರ,ಎ.26: 2015ರಲ್ಲಿ ತಾನು ರಚಿಸಿದ್ದ ಕೃತಿಯಲ್ಲಿ ರಜಪೂತ ದೊರೆ ಮಹಾರಾಣಾ ಪ್ರತಾಪ್ ಭಿಲ್ಲ ಸಮುದಾಯಕ್ಕೆ ಸೇರಿದ್ದ ಮತ್ತು ನಂತರವಷ್ಟೇ ಮೇವಾಡದ ರಾಣಾ ಸ್ಥಾನಕ್ಕೆ ಏರಿಸಲ್ಪಟ್ಟಿದ್ದ ಎಂದು ಬರೆದಿರುವುದಕ್ಕಾಗಿ ಕಳೆದೊಂದು ತಿಂಗಳಿನಿಂದ ಅಪರಿಚಿತ ವ್ಯಕ್ತಿಗಳಿಂದ ತನಗೆ ದೂರವಾಣಿಯಲ್ಲಿ ಜೀವ ಬೆದರಿಕೆ ಕರೆಗಳು ಬರುತ್ತಿವೆ ಎಂದು ರಾಜಸ್ಥಾನದ ಖ್ಯಾತ ದಲಿತ ಲೇಖಿಕಿ ಕುಸುಮ್ ಮೇಘ್ವಾಲ್ ಅವರು ಬುಧವಾರ ಇಲ್ಲಿ ತಿಳಿಸಿದರು.
ಹೀಗೆ ಕರೆ ಮಾಡುತ್ತಿರುವವರಲ್ಲಿ ಕೆಲವರು ತಾವು ಕರ್ಣಿ ಸೇನಾದವರು ಮತ್ತು ಇನ್ನು ಕೆಲವರು ಠಾಕೂರ್‌ಗಳೆಂದು ಹೇಳಿಕೊಳ್ಳುತ್ತಿದ್ದಾರೆ. ಕೆಲವು ವ್ಯಕ್ತಿಗಳು ತಾವು ‘ಭಾರತೀಯ ಸೇನೆ ’ಗೆ ಸೇರಿದವರು ಎಂದು ಹೇಳಿಕೊಂಡಿದ್ದಾರೆ. ಕಳೆದ ಏಳು ದಿನಗಳಿಂದ ತಾನು ಮನೆಯಿಂದ ಹೊರಗೆ ಬಿದ್ದಿಲ್ಲ ಎಂದು 65ಕ್ಕೂ ಅಧಿಕ ಪುಸ್ತಕಗಳನ್ನು ಬರೆದಿರುವ, ರಾಜಸ್ಥಾನ ವಿಧಾನಸಭಾ ಸ್ಪೀಕರ್ ಕೈಲಾಷ್ ಮೇಘ್ವಾಲ್ ಅವರ ಸೋದರಿಯಾಗಿರುವ ಮೇಘ್ವಾಲ್ ಹೇಳಿದರು.
ಮಹಾರಾಣಾ ಪ್ರತಾಪ್ ಭಿಲ್ಲ ರಾಜಪುತ್ರನಾಗಿದ್ದನೇ ಹೊರತು ಆತ ಕ್ಷತ್ರಿಯ ಅಥವಾ ರಜಪೂತನಾಗಿರಲಿಲ್ಲ ಎಂದು ತನ್ನ ಪುಸ್ತಕದಲ್ಲಿ ಬರೆದಿರುವ ಮೇಘ್ವಾಲ್, ಭಿಲ್ಲ ಪದವು ಸಂಸ್ಕೃತದ ಭಿಲ್ಲಾ ಶಬ್ದದಿಂದ ಬಂದಿದೆ. ಭಿಲ್ಲಾ ಎಂದರೆ ಶೂರ ಮತ್ತು ಹೋರಾಟಗಾರ ಎಂದು ಅರ್ಥವಾಗಿದೆ ಎಂರು. ಸಾಂಪ್ರದಾಯಿಕವಾಗಿ ಮೇವಾಡದಾದ್ಯಂತ ಹರಡಿರುವ ಭಿಲ್ಲ ಸಮುದಾಯವು ತನ್ನ ಯುದ್ಧಕಲೆಗಾಗಿ ಹೆಸರಾಗಿದೆ. ಮಹಾರಾಣಾ ಪ್ರತಾಪ್ ಕೂಡ ಭಿಲ್ಲನಾಗಿದ್ದು ಬಳಿಕ ಆತನನ್ನು ಸೂರ್ಯವಂಶಿಯಾಗಿಸಲು ಸಮಾರಂಭ ವೊಂದರಲ್ಲಿ ಮೇವಾಡದ ದೊರೆಯ ಹುದ್ದೆಗೆ ಏರಿಸಲಾಗಿತ್ತು ಎಂದರು.
‘‘ಯಾವುದೇ ವ್ಯಕ್ತಿಗೆ ನನ್ನ ಬರಹದ ಬಗ್ಗೆ ಆಕ್ಷೇಪವಿದ್ದರೆ ಆತ ಪ್ರತಿಯಾಗಿ ಬರೆಯಬಹುದು,ನ್ಯಾಯಾಲಯದಲ್ಲಿ ಮೊಕದ್ದಮೆಯನ್ನೂ ದಾಖಲಿಸಬಹುದು. ಆದರೆ ಜನರು ಚರ್ಚೆಗೆ ಮುಂದಾಗುವ ಬದಲು ಲೇಖಕರಿಗೆ ಬೆದರಿಕೆಯೊಡ್ಡಲು ಆರಂಭಿಸಿದರೆ ಅಭಿವ್ಯಕ್ತಿ ಸ್ವಾತಂತ್ರವೆಲ್ಲಿದೆ ಎಂದು ಮೇಘ್ವಾಲ್ ಪ್ರಶ್ನಿಸಿದರು.
ತಾನು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಲಿಖಿತ ದೂರನ್ನು ಸಲ್ಲಿಸಿದ್ದು, ಮಬೈಲ್ ಫೋನ್‌ನ್ನು ಸ್ವಿಚ್ ಆಫ್ ಮಾಡುವಂತೆ ಅವರು ತನಗೆ ಸಲಹೆ ನೀಡಿದ್ದಾರೆ. ತನಗೆ ಜೀವಭೀತಿಯಿದೆ, ಆದರೆ ಪೊಲೀಸರು ಯಾವುದೇ ಭದ್ರತೆಯನ್ನೊದಗಿಸಿಲ್ಲ ಎಂದು ಅವರು ಆಪಾದಿಸಿದರು.







