ಉ.ಪ್ರದೇಶ: ಕಾನೂನು ಉಲ್ಲಂಘಿಸಲು ‘ಕೇಸರಿ ಬ್ರಿಗೇಡ್’ಗೆ ಮುಕ್ತಾವಕಾಶ: ಮಾಯಾವತಿ ಆರೋಪ

ಲಕ್ನೊ, ಎ.26: ಉ.ಪ್ರದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕುಸಿದಿದೆ ಎಂಬ ಎಸ್ಪಿ ಮುಖಂಡ ಅಖಿಲೇಶ್ ಯಾದವ್ ಆರೋಪಕ್ಕೆ ಧ್ವನಿ ಕೂಡಿಸಿರುವ ಬಿಎಸ್ಪಿ ಅಧ್ಯಕ್ಷೆ ಮಾಯಾವತಿ, ಕಾನೂನು ಉಲ್ಲಂಘಿಸಲು ಕೇಸರಿ ಬ್ರಿಗೇಡ್‌ಗೆ ಮುಕ್ತ ಅವಕಾಶ ನೀಡಲಾಗಿದೆ ಎಂದು ದೂರಿದ್ದಾರೆ. ರಾಜ್ಯದ ಸಮಗ್ರ ಹಿತಾಸಕ್ತಿಯ ನಿಟ್ಟಿನಲ್ಲಿ ವಾಸ್ತವಿಕ ಕಾರ್ಯ ನಡೆಸುವ ಬದಲು, ಕೇಂದ್ರ ಸರಕಾರದಂತೆ ಅಗ್ಗದ ಪ್ರಚಾರಪ್ರಿಯತೆಗೆ ರಾಜ್ಯ ಸರಕಾರ ಹೆಚ್ಚಿನ ಮಹತ್ವ ನೀಡಿದೆೆ ಎಂದು ಮಾಯಾವತಿ ಟೀಕಿಸಿದರು.
ಈ ಹಿಂದಿನ ಎಸ್ಪಿ ಸರಕಾರದ ಅವಧಿಯಲ್ಲಿ ಗೂಂಡಾಗಳು ಮತ್ತು ಮಾಫಿಯಾ ತಂಡದವರ ಅಟ್ಟಹಾಸ ಮೇರೆ ಮೀರಿತ್ತು. ಈಗಿನ ಸರಕಾರದಲ್ಲಿ ಕೇಸರಿ ಬ್ರಿಗೇಡ್‌ನವರು ಕಾನೂನು ಸುವ್ಯವಸ್ಥೆಗೆ ಭಂಗ ತರುತ್ತಿದ್ದಾರೆ ಎಂದು ದೂರಿದ ಮಾಯಾವತಿ, ಕಾನೂನನ್ನು ಉಲ್ಲಂಘಿಸಿದವರೇ ‘ಹೀರೋ’ಗಳು ಎಂಬ ಅಪಾಯಕಾರಿ ಧೋರಣೆ ಈಗಿನ ಸರಕಾರದ ಅವಧಿಯಲ್ಲಿ ಬೆಳೆಯುತ್ತಿದೆ ಎಂದು ಅವರು ಟೀಕಿಸಿದರು.
ಇಲ್ಲಿ ನಡೆದ ಪಕ್ಷದ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು. ಆಡಳಿತ ಪಕ್ಷದ ಕಾರ್ಯನೀತಿ ಮತ್ತು ಯೋಜನೆಗಳಿಂದಾಗಿ ದಲಿತ, ಹಿಂದುಳಿದ ವರ್ಗದ ಜನರಿಗೆ ಸಮಸ್ಯೆಯಾಗಿದೆ ಎಂದು ದೂರಿದರು. ಮುಂಬರುವ ನಗರ ಸಂಸ್ಥೆಗಳ ಚುನಾವಣೆಯಲ್ಲಿ ಪಕ್ಷದ ಚಿಹ್ನೆಯಡಿ ಸ್ಪರ್ಧಿಸಲಾಗುವುದು. ಇದಕ್ಕೆ ಈಗಿನಿಂದಲೇ ಸಿದ್ದತೆ ಆರಂಭಿಸಿ ರಾಜಕೀಯ ಸವಾಲನ್ನು ಎದುರಿಸಬೇಕು ಎಂದವರು ಪಕ್ಷದ ಮುಖಂಡರಿಗೆ, ಕಾರ್ಯಕರ್ತರಿಗೆ ಕರೆ ನೀಡಿದರು.
ಉತ್ತರಪ್ರದೇಶದಲ್ಲಿ ಸರಕಾರ ಬದಲಾದ ಬಳಿಕ ಕೇಸರಿ ವರ್ಣದ ಬಟ್ಟೆ ಧರಿಸಿದರೆ ಪೊಲೀಸರ ಮೇಲೆಯೇ ಹಲ್ಲೆ ನಡೆಸುವ, ಪೊಲೀಸ್ ಠಾಣೆಯ ಮೇಲೆ ಆಕ್ರಮಣ ನಡೆಸುವ ಅನುಮತಿ ದೊರೆತಂತೆ ಎಂಬ ಭಾವನೆ ಹೆಚ್ಚಿದೆ ಎಂದು ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಟೀಕಿಸಿದ್ದರು.







