ವರ್ಗಾವಣೆಗೆ ಅರ್ಜಿ ಸಲ್ಲಿಸಿದರೆ ಕೆಲಸಕ್ಕೆ ಕೊಕ್: ಕಾಗೋಡು ತಿಮ್ಮಪ್ಪ

ಬೆಂಗಳೂರು, ಎ.26: ರಾಜ್ಯದಲ್ಲಿ ತಲೆದೋರಿರುವ ಭೀಕರ ಬರಗಾಲದ ಹಿನ್ನೆಲೆಯಲ್ಲಿ ಬೇಸಿಗೆ ಅವಧಿ ಮುಗಿಯುವವರೆಗೂ ತಹಶೀಲ್ದಾರ್, ಉಪ ವಿಭಾಗಾಧಿಕಾರಿ ಸೇರಿದಂತೆ ಕಂದಾಯ ಇಲಾಖೆಯ ಅಧಿಕಾರಿಗಳು ವರ್ಗಾವಣೆ ಕೋರಿ ಅರ್ಜಿ ಸಲ್ಲಿಸಿದರೆ, ಕೆಲಸವನ್ನೇ ಕಳೆದುಕೊಳ್ಳಬೇಕಾಗುತ್ತದೆ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಎಚ್ಚರಿಕೆ ನೀಡಿದ್ದಾರೆ.
ಬುಧವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಂದಾಯ ಇಲಾಖೆಯ ಅಧಿಕಾರಿಗಳ ವರ್ಗಾವಣೆ ಪ್ರಕ್ರಿಯೆಯನ್ನು ಮುಂದೂಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮತಿಸಿದ್ದಾರೆ. ಬರ ನಿರ್ವಹಣೆಯನ್ನು ಸಮರೋಪಾದಿಯಲ್ಲಿ ನಿರ್ವಹಿಸಬೇಕಿದೆ. ಈ ಹಿನ್ನೆಲೆಯಲ್ಲಿ ಇಂತಹ ಕಠಿಣ ನಿರ್ಧಾರ ಕೈಗೊಳ್ಳಬೇಕಿದ್ದು ಅನಿವಾರ್ಯ ಎಂದರು.
ತಹಶೀಲ್ದಾರ್, ಉಪವಿಭಾಗಾಧಿಕಾರಿ ಸೇರಿದಂತೆ ಬರಪರಿಸ್ಥಿತಿ ನಿರ್ವಹಣೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕಾದ ಯಾವ ಅಧಿಕಾರಿಗಳನ್ನು ಮುಂದಿನ ಮೂರು ತಿಂಗಳವರೆಗೆ ವರ್ಗಾವಣೆ ಮಾಡುವ ಪ್ರಶ್ನೆಯೇ ಇಲ್ಲ. ಒಂದು ವೇಳೆ ಯಾರಾದರೂ ವರ್ಗಾವಣೆಗಾಗಿ ಅರ್ಜಿ ಸಲ್ಲಿಸಿದರೆ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ನುಡಿದರು.
ಕುಡಿಯುವ ನೀರು ಮತ್ತು ಬರಪರಿಸ್ಥಿತಿ ನಿರ್ವಹಣೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರ್ ನೇತೃತ್ವದಲ್ಲಿ ಸಭೆ ನಡೆಸಬೇಕು. ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಪ್ರತಿದಿನ ಕುಡಿಯುವ ನೀರಿನ ಕುರಿತು ತಹಶೀಲ್ದಾರ್‌ಗೆ ವರದಿಯನ್ನು ನೀಡುವಂತೆ ಸೂಚನೆ ನೀಡಲಾಗಿದೆ ಎಂದು ಅವರು ತಿಳಿಸಿದರು.
ಕುಡಿಯುವ ನೀರಿಗಾಗಿ ಶಾಸಕರ ನೇತೃತ್ವದಲ್ಲಿರುವ ಕಾರ್ಯಪಡೆಗಳಿಗೆ ತಲಾ 2 ಕೋಟಿ ರೂ.ಅನುದಾನ ಒದಗಿಸಲಾಗಿದೆ. ಅಲ್ಲದೆ, ಬರ ನಿರ್ವಹಣೆಗಾಗಿ ತಲಾ 1.30 ಕೋಟಿ ರೂ.ಗಳನ್ನು ಒದಗಿಸಲಾಗಿದೆ. ಈ ಹಣವನ್ನು ಸಂಪೂರ್ಣವಾಗಿ ಖರ್ಚು ಮಾಡಿದರೆ, ನಂತರ ಹೆಚ್ಚುವರಿಯಾಗಿ ಹಣ ನೀಡಲು ಸರಕಾರ ಸಿದ್ಧವಿದೆ ಎಂದು ಕಾಗೋಡು ತಿಮ್ಮಪ್ಪ ಹೇಳಿದರು.
ಅಗತ್ಯವಿರುವ ಕಡೆ ಗೋಶಾಲೆಗಳನ್ನು ತೆರೆಯಬೇಕು, ಪ್ರತಿ ತಾಲೂಕಿನಲ್ಲೂ ಜಾನುವಾರುಗಳಿಗೆ ಮೇವಿನ ವ್ಯವಸ್ಥೆ ಕಲ್ಪಿಸಲಾಗಿದೆ. ಒಂದು ತಿಂಗಳಿಗಾಗುವಷ್ಟು ಮೇವು ದಾಸ್ತಾನು ಲಭ್ಯವಿದೆ. ಕೆಲವು ಕಡೆ ಜಾನುವಾರುಗಳಿಗೆ ರೋಗದ ಬಾಧೆ ಇರುವುದರಿಂದ ರೈತರ ಮನೆಗಳಿಗೆ ಮೇವು ಒದಗಿಸಲಾಗುತ್ತಿದೆ. ಪಂಜಾಬ್‌ನಿಂದಲೂ ಜಾನುವಾರುಗಳಿಗೆ ಮೇವು ತರಿಸಲಾಗಿದೆ ಎಂದು ಅವರು ತಿಳಿಸಿದರು.
ಕುಡಿಯುವ ನೀರಿನ ಪೂರೈಕೆಗೆ ಹಣಕಾಸಿನ ತೊಂದರೆ ಇಲ್ಲ. ಎಲ್ಲ ಜಿಲ್ಲಾಧಿಕಾರಿಗಳ ಬಳಿ ತಲಾ 8ರಿಂದ 10 ಕೋಟಿ ರೂ.ಗಳಷ್ಟು ಹಣವಿದೆ. ಕುಡಿಯುವ ನೀರಿನ ಸಮಸ್ಯೆ ಇರುವಂತಹ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
-ಕಾಗೋಡು ತಿಮ್ಮಪ್ಪ, ಕಂದಾಯ ಸಚಿವ







