ಯುವತಿಯನ್ನು ಅಪಹರಿಸಿ, ಸಾಮೂಹಿಕ ಅತ್ಯಾಚಾರ: ಅಪರಾಧಿಗಳಿಗೆ 11 ವರ್ಷ ಸಜೆ

ದಾವಣಗೆರೆ, ಎ.26: ಯುವತಿಯನ್ನು ಅಪಹರಿಸಿ ಸಾಮೂಹಿಕವಾಗಿ ಅತ್ಯಾಚಾರ ಮಾಡಿದ್ದ ನಾಲ್ವರು ಆರೋಪಿಗಳಿಗೆ ಇಲ್ಲಿನ 2 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 11 ವರ್ಷ ಕಾರಾಗೃಹ ಶಿಕ್ಷೆ ವಿಧಿಸಿ ಬುಧವಾರ ಮಹತ್ವದ ತೀರ್ಪು ನೀಡಿದೆ.
ರಾಘವೇಂದ್ರ,ದೇವರಾಜು,ರಘು ಮತ್ತು ಸಂತೋಷ್ ಶಿಕ್ಷೆಗೆ ಗುರಿಯಾದ ಆರೋಪಿಗಳು. 2012ರ ಡಿಸೆಂಬರ್ 17ರಂದು ರಾತ್ರಿ 8 ಗಂಟೆ ಸುಮಾರಿಗೆ ಗೀತಾ(ಹೆಸರು ಬದಲಿಸಲಾಗಿದೆ) ಎಂಬಾಕೆಯನ್ನು ರಾಘವೇಂದ್ರ ತನ್ನ ಆಟೋದಲ್ಲಿ ದೇವರಾಜನ ಜೊತೆ ಸೇರಿ ಅಪಹರಿಸಿಕೊಂಡು ಹೋಗಿದ್ದರು. ನಂತರ ರಘು ಹಾಗೂ ಸಂತೋಷ ಇವರೊಂದಿಗೆ ಸೇರಿ ಯುವತಿಯ ಸಾಮೂಹಿಕ ಅತ್ಯಾಚಾರ ಎಸಗಿದ್ದರು.
ಈ ಕುರಿತು ದಾವಣಗೆರೆ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಕೆಯಾಗಿತ್ತು. ಸುದೀರ್ಘ 5 ವರ್ಷಗಳ ಕಾಲ ವಿಚಾರಣೆ ನಡೆದು ವಾದ, ವಿವಾದಗಳನ್ನು ಆಲಿಸಿದ 2 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಮಲ್ಲಿಕಾರ್ಜುನ ಗೌಡ ನಾಲ್ವರ ವಿರುದ್ಧದ ಆರೋಪಗಳು ಸಾಕ್ಷ್ಯಾಧಾರಗಳ ಸಹಿತ ಸಾಬೀತಾದ ಹಿನ್ನೆಲೆಯಲ್ಲಿ ಯುವತಿಯ ಅಪಹರಣಕ್ಕಾಗಿ 5 ವರ್ಷ ಶಿಕ್ಷೆ ಹಾಗೂ 5 ಸಾವಿರ ರೂ ದಂಡ, ದಂಡ ಕೊಡಲು ತಪ್ಪಿದಲ್ಲಿ ಮತ್ತೆ 6 ತಿಂಗಳ ಸಜೆ, ಅತ್ಯಾಚಾರ ಪ್ರಕರಣಕ್ಕಾಗಿ 6 ವರ್ಷ ಶಿಕ್ಷೆ ತಲಾ 10 ಸಾವಿರ ರೂ ದಂಡ, ದಂಡ ಕೊಡಲು ತಪ್ಪಿದಲ್ಲಿ ಮತ್ತೆ 1 ವರ್ಷ ಶಿಕ್ಷೆ ಹಾಗೂ ಜೀವ ಬೆದರಿಕೆ ಆಪಾದನೆಗಾಗಿ 1 ಸಾವಿರ ರೂ., ದಂಡ ನೀಡಲು ತಪ್ಪಿದಲ್ಲಿ 1 ವರ್ಷ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.
ದಂಡದ ಹಣದಲ್ಲಿ ನೊಂದ ಯುವತಿಗೆ 50 ಸಾವಿರ ರೂ. ಪರಿಹಾರವಾಗಿ ನೀಡುವಂತೆ ಆದೇಶಿಸಿದ್ದಾರೆ. ಪ್ರಕರಣದಲ್ಲಿ ಸರಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಎಸ್.ಎಸ್.ಕುದುರಿ ಮತ್ತು ಕೆ.ಕೆಂಚಪ್ಪ ವಾದ ಮಂಡಿಸಿದ್ದರು.







