ನನ್ನ ಮಗ ದೇಶಕ್ಕಾಗಿ ಹೋರಾಡಿದ ಹೆಮ್ಮೆಯಿದೆ: ಫರೀದಾ ಬೀಬಿ
ನಕ್ಸಲರ ದಾಳಿಗೆ ಜಗ್ಗದ ಶೇರ್ ಮುಹಮ್ಮದ್ ತಾಯಿಯ ಹೇಳಿಕೆ

ಮೀರತ್, ಎ.26: ನನ್ನ ಮಗ ದೇಶಕ್ಕಾಗಿ ಸಿಂಹದಂತೆ ಹೋರಾಡಿದ್ದಾನೆ ಎಂಬ ಹೆಮ್ಮೆಯಿದೆ ಎನ್ನುತ್ತಾರೆ ಮೀರತ್‌ನ ಬುಲಂದ್‌ಶಹರ್ ನಿವಾಸಿ ಫರೀದಾ ಬೀಬಿ.
ಇವರ ಪುತ್ರ ಶೇರ್ ಮುಹಮ್ಮದ್ ಛತ್ತೀಸ್‌ಗಢದ ಸುಕ್ಮಾ ಜಿಲ್ಲೆಯಲ್ಲಿ ನಕ್ಸಲರು ನಡೆಸಿದ ಗುಂಡಿನ ದಾಳಿಯಲ್ಲಿ ತೀವ್ರ ಗಾಯಗೊಂಡು ರಾಯ್‌ಪುರದ ಆಸ್ಪತ್ರೆಗೆ ದಾಖಲಿಸಲ್ಪಟ್ಟ ವಿಷಯ ತಿಳಿದಾಗ 65ರ ಹರೆಯದ ಫರೀದಾ ಕಳವಳಗೊಂಡಿದ್ದರು. ಆದರೆ ತೀವ್ರ ಗಾಯಗೊಂಡರೂ ತಮ್ಮ ಮಗ ಮೂವರು ನಕ್ಸಲರನ್ನು ಹೊಡೆದುರುಳಿಸಿದ ಎಂಬ ವಿಷಯ ತಿಳಿದಾಗ ಈಕೆಯ ಮುಖದಲ್ಲಿ ಮಂದಹಾಸ ಕಾಣಿಸಿಕೊಂಡಿತ್ತು.
ಸೇನೆ ಅಥವಾ ಸಿಆರ್‌ಪಿಎಫ್‌ಗೆ ಸೇರುವುದು ಎಂದರೆ ಅಪಾಯಕ್ಕೆ ಆಹ್ವಾನ ನೀಡಿದಂತೆ ಎಂಬುದು ನಮಗೆ ಗೊತ್ತು. ಆದರೆ ದೇಶಪ್ರೇಮ ನಮ್ಮ ರಕ್ತದಲ್ಲೇ ಹರಿಯುತ್ತಿದೆ. ದೇಶಕ್ಕಾಗಿ ಹೋರಾಡಿ ಗಾಯಗೊಂಡ ಮಗನ ಬಗ್ಗೆ ತನಗಷ್ಟೇ ಅಲ್ಲ, ಇಡೀ ಗ್ರಾಮದ ಜನರಿಗೇ ಹೆಮ್ಮೆಯಿದೆ ಎನ್ನುತ್ತಾರೆ ಅವರು.
ಶೇರ್ ಅವರ ತಂದೆ ನೂರ್ ಮುಹಮ್ಮದ್, ಮಾವ ಅಬ್ದುಲ್ ಸಲಾಂ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದವರು. ನಮ್ಮ ಕುಟುಂಬದ ಸಂಪ್ರದಾಯವನ್ನು ಶೇರ್ ಮುಂದುವರಿಸಿದ್ದಾನೆ. ಶೇರ್‌ನ ಪುತ್ರ ಸೊಹೈಲ್ ಇದೀಗ 2 ವರ್ಷದ ಮಗು. ಈತ ಕೂಡಾ ಮುಂದೆ ದೇಶಸೇವೆಗೆ ಹೊರಡುತ್ತಾನೆ ಎಂಬ ಭರವಸೆ ಇದೆ ಎಂದು ಹೆಮ್ಮೆಯಿಂದ ಹೇಳುತ್ತಾರೆ ಫರೀದ.
ಶೇರ್ ಸಿಆರ್‌ಪಿಎಫ್‌ನ 74ನೇ ಬಟಾಲಿಯನ್‌ಗೆ ಸೇರಿದ್ದ ಯೋಧ. ಸುಕ್ಮಾದಲ್ಲಿ ನಡೆಯುತ್ತಿದ್ದ ರಸ್ತೆ ಕಾಮಗಾರಿಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಯೋಧರ ಮೇಲೆ ್ತ್ರಏಕಾಏಕಿ ಸುಮಾರು 300ರಷ್ಟು ನಕ್ಸಲರು ದಾಳಿ ನಡೆಸಿದ್ದರು. ಈ ವೇಳೆ ಯೋಧರೂ ಪ್ರತಿದಾಳಿ ನಡೆಸಿ ಸುಮಾರು 12 ನಕ್ಸಲರನ್ನು ಹೊಡೆದುರುಳಿಸಿದ್ದರು. ಸೊಂಟ ಹಾಗೂ ಮೊಣಕಾಲಿಗೆ ಐದು ಗುಂಡೇಟು ಹೊಕ್ಕರೂ ಹಿಂಜರಿಯದ ಶೇರ್ ಮುಹಮ್ಮದ್ ಮೂವರು ನಕ್ಸಲರನ್ನು ಗುಂಡಿಟ್ಟು ಹತ್ಯೆ ಮಾಡಿದ್ದ ಎಂದು ಇತರ ಯೋಧರು ತಿಳಿಸುತ್ತಾರೆ.







