ದಿವಿತ್, ಪಂಚಮಿ ಮಾರೂರು, ಫ್ಲರ್ವಿಶಾ ವೆಲಿಶಾ, ಗೌರವ್‌ದೇವ್‌ಗೆ ಅಸಾಧಾರಣ ಪ್ರತಿಭೆ ಪ್ರಶಸ್ತಿ ಪ್ರದಾನ
ಹೊಯ್ಸಳ- ಕೆಳದಿ ಚೆನ್ನಮ್ಮ ಪ್ರಶಸ್ತಿ ಯೋಜನೆ

ಮಂಗಳೂರು, ಎ.25: ಗೃಹ ಸಚಿವರ ಜತೆ ಸಂವಾದ ನಡೆಸಿ ಗಮನ ಸೆಳೆದಿದ್ದ ಬಾಲ ಪ್ರತಿಭೆ ಮಾಸ್ಟರ್ ಬಿ. ದಿವಿತ್ ಯು. ರೈ ಸೇರಿದಂತೆ ನಾಲ್ಕು ಮಂದಿ ಯುವ ಪ್ರತಿಭೆಗಳಿಗೆ ಇಂದು ಜಿಲ್ಲಾ ಪಂಚಾಯತ್‌ನ ನೇತ್ರಾವತಿ ಸಭಾಂಗಣದಲ್ಲಿ ಹೊಯ್ಸಳ ಮತ್ತು ಕೆಳದಿ ಚೆನ್ನಮ್ಮ ಪ್ರಶಸ್ತಿ ಯೋಜನೆಯಡಿ ಜಿಲ್ಲಾ ಮಟ್ಟದ ಅಸಾಧಾರಣ ಪ್ರತಿಭೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಪುತ್ತೂರಿನ ಸರಕಾರಿ ಮಾದರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯ 8ನೆ ತರಗತಿಯ ಬಿ. ದಿವಿತ್ ಯು. ರೈಗೆ ಹಾಗೂ ಮೂಡಬಿದ್ರೆಯ ಜೈನ್ ಪ್ರೌಢಶಾಲೆಯ 9ನೆ ತರಗತಿಯ ವಿದ್ಯಾರ್ಥಿನಿ ಪಂಚಮಿ ಮಾರೂರು ಅವರಿಗೆ ಸಮಾಜ ಸೇವಾ ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ ಮತ್ತು ಮಂಗಳೂರಿನ ಮಿಲಾಗ್ರಿಸ್ ಶಾಲೆಯ 10ನೆ ತರಗತಿಯ ವಿದ್ಯಾರ್ಥಿನಿ ಫೆಲಿಶ್ ಮೊಂತೆರೋ ಅವರು ಕ್ರೀಡಾ ಕ್ಷೇತ್ರದ ಸಾಧನೆಗಾಗಿ ಮತ್ತು ನಗರದ ಬೊಕ್ಕಪಟ್ಣ ಸರಕಾರಿ ಪದವಿ ಪೂರ್ವ ಕಾಲೇಜಿನ 9ನೆ ತರಗತಿಯ ವಿದ್ಯಾರ್ಥಿ ಗೌರವ್‌ದೇವ್ ಎಚ್.ಬಿ.ಗೆ ಚಿತ್ರಕಲಾ ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ ತಲಾ 10,000 ರೂ. , ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.
ಸಾಂತ್ವನ ಯೋಜನೆಯಡಿ 5 ಕೇಂದ್ರಗಳಿಗೆ ಕಂಪ್ಯೂಟರ್ ವಿತರಣೆ: ಸಭೆಯ ಆರಂಭದಲ್ಲಿ ಸಾಂತ್ವನ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ಐದು ಸ್ವಯಂ ಸೇವಾ ಸಂಸ್ಥೆಗಳಿಗೆ ಎಂಆರ್‌ಪಿಎಲ್ ವತಿಯಿಂದ ಒಟ್ಟು 1.8 ಲಕ್ಷ ರೂ. ವೆಚ್ಚದಲ್ಲಿ ಒದಗಿಸಲಾದ ಕಂಪ್ಯೂಟರ್‌ಗಳನ್ನು ಈ ಸಂದರ್ಭ ವಿತರಿಸಲಾಯಿತು.
ಪ್ರಜ್ಞಾ ಕೌನ್ಸೆಲಿಂಗ್ ಪರವಾಗಿ ಡಾ. ಹಿಲ್ಡಾ ರಾಯಪ್ಪನ್, ಜನಶಿಕ್ಷಣ ಟ್ರಸ್ಟ್‌ನ ಪರವಾಗಿ ಕೃಷ್ಣ ಮೂಲ್ಯ ಹಾಗೂ ಪುತ್ತೂರು, ಸುಳ್ಯ ಮತ್ತು ಬೆಳ್ತಂಗಡಿಯ ಮಹಿಳಾ ಸಮಾಜದ ಮುಖ್ಯಸ್ಥರು ಕಂಪ್ಯೂಟರ್‌ಗಳನ್ನು ಸ್ವೀಕರಿಸಿದರು.







