17 ಲಕ್ಷ ರೈತರಿಗೆ 1,100 ಕೋಟಿ ರೂ.ಮುಂಗಾರು ಬೆಳೆ ನಷ್ಟ ಪರಿಹಾರ ಬಿಡುಗಡೆ: ಸಚಿವ ಕಾಗೋಡು

ಬೆಂಗಳೂರು, ಎ.26: ಮುಂಗಾರು ಬೆಳೆ ನಷ್ಟ ಪರಿಹಾರದ ಮೊತ್ತ ಪ್ರತಿ ಹೆಕ್ಟೇರ್‌ಗೆ 6,800 ರೂ.ಗಳಂತೆ ಸುಮಾರು 17 ಲಕ್ಷ ರೈತರಿಗೆ 1,100 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದ್ದು, ರೈತರ ಖಾತೆಗಳಿಗೆ ನೇರವಾಗಿ ಹಣ ಜಮಾ ಮಾಡಲಾಗಿದೆ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪತಿಳಿಸಿದ್ದಾರೆ.
ಬುಧವಾರ ವಿಧಾನಸೌಧದಲ್ಲಿನ ತಮ್ಮ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇನ್ನುಳಿದ 10 ಲಕ್ಷ ರೈತರಿಗೆ ಪರಿಹಾರ ಹಣವನ್ನು ತಿಂಗಳಾಂತ್ಯದಲ್ಲಿ ಬಿಡುಗಡೆ ಮಾಡಲಾಗುವುದು. ರೈತರಿಗೆ ಬಿಡುಗಡೆ ಮಾಡಿರುವ ಪರಿಹಾರದ ಹಣವನ್ನು ರೈತರು ಈ ಹಿಂದೆ ಪಡೆದಿರುವ ಸಾಲಕ್ಕೆ ಮುಟ್ಟುಗೋಲು ಹಾಕಿಕೊಳ್ಳದಂತೆ ಬ್ಯಾಂಕುಗಳಿಗೆ ಸ್ಪಷ್ಟ ಸೂಚನೆ ನೀಡಲಾಗಿದೆ. ಮುಂಗಾರು ಹಂಗಾಮಿನಲ್ಲಿ ಸುಮಾರು 160 ತಾಲೂಕುಗಳನ್ನು ಬರಪೀಡಿತವೆಂದು ಘೋಷಣೆ ಮಾಡಲಾಗಿದೆ ಎಂದು ಅವರು ಹೇಳಿದರು.
ಮುಂಗಾರು ಬೆಳೆ ನಷ್ಟ ಪರಿಹಾರಕ್ಕಾಗಿ ಕೇಂದ್ರದ ಮಾರ್ಗಸೂಚಿ ಅನ್ವಯ 1,720 ಕೋಟಿ ರೂ.ಬಿಡುಗಡೆಯಾಗಿದೆ. ಈ ಹಣವನ್ನು ರೈತರಿಗೆ ತಲುಪಿಸುವ ಕೆಲಸ ಮುಂದುವರೆದಿದೆ ಎಂದು ಕಾಗೋಡು ತಿಮ್ಮಪ್ಪ ತಿಳಿಸಿದರು.
ಹಿಂಗಾರು ಬೆಳೆ ನಷ್ಟ ಪರಿಹಾರಕ್ಕಾಗಿ ಕೇಂದ್ರ ಸರಕಾರಕ್ಕೆ 3,458 ಕೋಟಿ ರೂ. ಪರಿಹಾರ ನೀಡುವಂತೆ ಕೋರಿ ಮನವಿ ಮಾಡಲಾಗಿದೆ. ಇನ್ನೊಂದು ವಾರದಲ್ಲಿ ಹಣ ಬಿಡುಗಡೆಯಾಗದಿದ್ದರೆ ಮತ್ತೊಮ್ಮೆ ಹೊಸದಿಲ್ಲಿಗೆ ತೆರಳಿ ಕೇಂದ್ರ ಕೃಷಿ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗುವುದು ಎಂದು ಅವರು ಹೇಳಿದರು.







