ಐಪಿಎಲ್ ಯಶಸ್ಸಿನ ಶ್ರೇಯಸ್ಸು ಗಂಭೀರ್‌ಗೆ ಸಲ್ಲಿಸಿದ ರಾಣಾ

ಹೊಸದಿಲ್ಲಿ, ಎ.26: ಈವರ್ಷದ ಐಪಿಎಲ್‌ನಲ್ಲಿ ಬ್ಯಾಟಿಂಗ್‌ನ ಮೂಲಕ ಹೊಸ ಸಂಚಲನ ಮೂಡಿಸಿದ್ದ ಮುಂಬೈ ಇಂಡಿಯನ್ಸ್ ಆಟಗಾರ ನಿತೀಶ್ ರಾಣಾ ತನ್ನ ಯಶಸ್ಸಿನ ಶ್ರೇಯಸ್ಸನ್ನು ಕೋಲ್ಕತಾ ನೈಟ್ ರೈಡರ್ಸ್ ನಾಯಕ ಗೌತಮ್ ಗಂಭೀರ್‌ಗೆ ಸಲ್ಲಿಸಿದರು.
ಗಂಭೀರ್ ಸಲಹೆಯ ಮೇರೆಗೆ ರಾಣಾ ತನ್ನ ಬ್ಯಾಟಿಂಗ್ ಶೈಲಿಯನ್ನು ಬದಲಿಸಿಕೊಂಡಿದ್ದರು. ಗಂಭೀರ್ ಸಲಹೆಯ ಬಗ್ಗೆ ಮುಂಬೈ ಇಂಡಿಯನ್ಸ್‌ನ ಮುಖ್ಯ ಕೋಚ್ ಮಹೇಲ ಜಯವರ್ಧನೆ ಹಾಗೂ ಸಲಹೆಗಾರ ಸಚಿನ್ ತೆಂಡುಲ್ಕರ್‌ರೊಂದಿಗೆ ಚರ್ಚಿಸಿದ್ದ ರಾಣಾ ತನ್ನ ಟೆಕ್ನಿಕ್‌ನ್ನು ಬದಲಿಸಿಕೊಳ್ಳಲು ನಿರ್ಧರಿಸಿದ್ದರು.
‘‘ನಾನು ಏಕದಿನ ಪಂದ್ಯಗಳಲ್ಲಿ ಬೇಗನೆ ಔಟಾಗುತ್ತಿದ್ದೆ. ನನ್ನ ಬ್ಯಾಟಿಂಗ್ ಟೆಕ್ನಿಕ್‌ನ ಕುರಿತು ಗಂಭೀರ್ ನನ್ನ ಬಳಿ ಮಾತನಾಡಿದ್ದರು. ಮುಂಬೈ ತಂಡಕ್ಕೆ ಪ್ರವೇಶಿಸಿದ ಬಳಿಕ ಈಕುರಿತು ಸಚಿನ್ ಸರ್ ಹಾಗೂ ಮಹೇಲ ಸರ್ ಬಳಿ ಮಾತನಾಡಿದ್ದೆ. ಗಂಭೀರ್ ಸಲಹೆ ಸರಿಯಾಗಿದೆ ಎಂದು ಇಬ್ಬರು ಹೇಳಿದ್ದರು. ಆ ನಂತರ ನಾನು ಗಂಭೀರ್ ಸಲಹೆಯಂತೆಯೇ ಅಭ್ಯಾಸ ನಡೆಸಲಾರಂಭಿಸಿದ್ದೆ’’ ಎಂದು ರಾಣಾ ಹೇಳಿದರು.
ರಾಣಾ ಈಗ ನಡೆಯುತ್ತಿರುವ ಐಪಿಎಲ್‌ನಲ್ಲಿ 135.02ರ ಸ್ಟ್ರೈಕ್‌ರೇಟ್‌ನಲ್ಲಿ ಒಟ್ಟು 266 ರನ್ ಗಳಿಸಿದ್ದಾರೆ. ಗರಿಷ್ಠ ಸ್ಕೋರರ್ ಪಟ್ಟಿಯಲ್ಲಿ ನಾಲ್ಕನೆ ಸ್ಥಾನದಲ್ಲಿದ್ದಾರೆ. ಈ ವರ್ಷ ಮೂರು ಅರ್ಧಶತಕಗಳನ್ನು ಬಾರಿಸಿರುವ ರಾಣಾ ಹೈದರಾಬಾದ್‌ನ ಹೆನ್ರಿಕ್ಸ್ ಸಾಧನೆಯನ್ನು ಸರಿಗಟ್ಟಿದ್ದಾರೆ.







