ಡಾ.ರಾಜ್ ಸಂಘಟನೆಯಿಂದ ಉಚಿತ ನೇತ್ರ ಚಿಕಿತ್ಸಾ ಶಿಬಿರ

ಕುಂದಾಪುರ, ಎ.26: ಕೇವಲ ದೇವರ ಸೇವೆಯಿಂದಷ್ಟೇ ಅಲ್ಲ, ಮಾನವ ಸೇವೆಯಿಂದಲೂ ಜೀವನವನ್ನು ಪಾವನಗೊಳಿಸಬಹುದು ಎಂದು ಕುಂದಾಪುರ ಶ್ರೀಮಹಾಕಾಳಿ ದೇವಸ್ಥಾನದ ಆಡಳಿತ ಮೊಕ್ತೇಸರ ಜಯಾನಂದ ಖಾರ್ವಿ ಹೇಳಿದ್ದಾರೆ.
ಕನ್ನಡನಾಡಿನ ದಂತಕತೆ ಡಾ.ರಾಜ್‌ಕುಮಾರ್ ಅವರ 89ನೇ ಹುಟ್ಟುಹಬ್ಬದ ನೆನೆಪಿನಲ್ಲಿ ಕುಂದಾಪುರ ಕನ್ನಡಾಭಿಮಾನಿ ಡಾ.ರಾಜ್ ಸಂಘಟನೆ ಸದಸ್ಯರು ಸಾರ್ವಜನಿಕರಿಗಾಗಿ ಕುಂದಾಪುರ ಹಿರಿಯ ಪ್ರಾಥಮಿಕ ಮಾದರಿ ಶಾಲೆ (ಬಾಲಕಿಯರ)ಯಲ್ಲಿ ಚಾರ್ಮಕ್ಕಿ ನಾರಾಯಣಶೆಟ್ಟಿ ಸ್ಮಾರಕ ಲಯನ್ಸ್ ಕಣ್ಣಿನ ಆಸ್ಪತ್ರೆ ಕೋಟ ಇವರ ಸಹಭಾಗಿತ್ವದಲ್ಲಿ ಆಯೋಜಿಸಲಾದ ಉಚಿತ ನೇತ್ರ ಚಿಕಿತ್ಸಾ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಕನ್ನಡ ಚಿತ್ರರಂಗದ ದಿಲೀಪ್‌ರಾಜ್ ಅವರು ‘ಅಣ್ಣಾವ್ರ ನೆನಪಿನಲ್ಲಿ ಕರಾವಳಿ ಭಾಗದಲ್ಲಿ ಮಾನವತಾ ಸೇವೆ ಸಲ್ಲಿಸುತ್ತಿ ರುವ ಸಂಘಟನೆಯ ಸದಸ್ಯರು ಅಭಿನಂದನಾರ್ಹರು ಎಂದರು.
ವೇದಿಕೆಯಲ್ಲಿ ಕುಂದಾಪುರ ಡಾ.ರಾಜ್ ಸಂಘಟನೆಯ ಅಧ್ಯಕ್ಷ ರತ್ನಾಕರ ಪೂಜಾರಿ, ಕೋಟ ಚಾರ್ಮಕ್ಕಿ ನಾರಾಯಣ ನೇತ್ರಾಲಯದ ನೇತ್ರ ತಜ್ಙೆ ಡಾ.ರೂಪಶ್ರೀ, ಶಾಲಾ ಮುಖ್ಯೋಪಾಧ್ಯಾಯಿನಿ ಸುಮನಾ ಉಪಸ್ಥಿತರಿದ್ದರು. ಬಳಗದ ಸುನೀಲ್ ಖಾರ್ವಿ ತಲ್ಲೂರು ಸ್ವಾಗತಿಸಿದರು. ಡುಂಡಿರಾಜ್ ವಂದಿಸಿ, ಪತ್ರಕರ್ತ ಮಝರ್ ಕುಂದಾಪುರ ಕಾರ್ಯಕ್ರಮ ನಿರೂಪಿಸಿದರು.







