ಉಡುಪಿ: ಕೊಟ್ಪಾ ಅನುಷ್ಠಾನಕ್ಕೆ ನಿರಂತರ ದಾಳಿ

ಉಡುಪಿ, ಎ.26: ಉಡುಪಿ ಜಿಲ್ಲೆಯನ್ನು ಕೊಟ್ಪಾದಡಿ ಉನ್ನತ ಅನುಷ್ಠಾನ ಜಿಲ್ಲೆ ಎಂದು ಘೋಷಿಸಲು ಜಿಲ್ಲಾ ತಂಬಾಕು ನಿಯಂತ್ರಣ ಘಟಕ ಜಿಲ್ಲೆ ಯಾದ್ಯಂತ ದಾಳಿಗಳನ್ನು ನಡೆಸಿದ್ದು, ಸುಮಾರು 20,950 ರೂ.ಗಳ ದಂಡವನ್ನು ಸಂಗ್ರಹಿಸಿದೆ.
ಹಿರಿಯಡ್ಕ, ಕಾರ್ಕಳ, ಕುಂದಾಪುರ, ಹೆಬ್ರಿ, ಮಣಿಪಾಲ, ಮಲ್ಪೆ, ಉಡುಪಿ ನಗರ ಸೇರಿದಂತೆ ಹಲವೆಡೆ ವಿವಿಧ ತಂಡಗಳು ದಾಳಿ ನಡೆಸಿ ತಂಬಾಕು ನಿಯಂತ್ರಣಕ್ಕೆ ಕ್ರಮಕೈಗೊಳ್ಳುತ್ತಿದೆ. ಜಿಲ್ಲಾ ತಂಬಾಕು ನಿಯಂತ್ರಣ ಘಟಕ, ಆರೋಗ್ಯ ಇಲಾಖೆ, ಆಹಾರ ಭದ್ರತೆ ಮತ್ತು ಪೊಲೀಸ್ ಇಲಾಖೆ, ಶಿಕ್ಷಣ, ಕಾರ್ಮಿಕ ಹಾಗೂ ನಗರಸಭೆ ಉಡುಪಿ ಸಹಯೋಗದೊಂದಿಗೆ ದಾಳಿ ಕೈಗೊಳ್ಳಲಾಗಿದೆ.
ಆಹಾರ ಸುರಕ್ಷತೆ ಅಡಿಯಲ್ಲಿ 25 ಅಂಗಡಿಗಳ ಮೇಲೆ ದಾಳಿ ನಡೆಸಿ ನಿಷೇಧಿತ ತಂಬಾಕ ಉತ್ಪನ್ನಗಳನ್ನು ವಶಪಡಿಸಿಕೊಂಡು 14 ಅಂಗಡಿಗಳಿಗೆ ನೋಟೀಸು ನೀಡಲಾಗಿದೆ. ಕೊಟ್ಪಾ 2003 ಕಾಯಿದೆಯ ಸೆಕ್ಷನ್ 4 ಮತ್ತು ಸೆಕ್ಷನ್ 6ಎ ನಾಮಫಲಕಗಳನ್ನು ಕಡ್ಡಾಯವಾಗಿ ಅಂಗಡಿಗಳಲ್ಲಿ ಪ್ರದರ್ಶಿಸಬೇಕೆಂದು ಸೂಚಿಸಲಾಗಿದೆ. ಸೆಕ್ಷನ್ 6ಬಿಯಂತೆ ಶಿಕ್ಷಣ ಸಂಸ್ಥೆಯ 100 ಗಜದ ಅಂತರದಲ್ಲಿ ತಂಬಾಕು ಉತ್ಪನ್ನ ಮಾರಾಟ ಸ್ಥಗಿತಗೊಳಿಸಬೇಕೆಂದು ಸೂಚಿಸಲಾಗಿದೆ.





