ವೈದ್ಯೆಗೆ ಬೆದರಿಸಿ ಹಣಕ್ಕೆ ಬೇಡಿಕೆ: ಮಾನವ ಹಕ್ಕುಗಳ ಸಮಿತಿ ರಾಜ್ಯಾಧ್ಯಕ್ಷ ಸೇರಿ ನಾಲ್ವರ ಬಂಧನ

ಬೆಂಗಳೂರು, ಎ.26: ಗರ್ಭಿಣಿಯಾಗಿದ್ದ ಕಾಲೇಜು ವಿದ್ಯಾರ್ಥಿನಿಯೊಬ್ಬಳಿಗೆ ಗರ್ಭಪಾತ ಮಾಡಿಸಿದ ನೆಪದಲ್ಲಿ ವೈದ್ಯೆಯೊಬ್ಬರನ್ನು ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಸಮಿತಿಯ ಹೆಸರಿನಲ್ಲಿ ಬೆದರಿಸಿ ಹಣಕ್ಕೆ ಬೇಡಿಕೆಯಿಟ್ಟಿದ್ದ ಆರೋಪದ ಮೇಲೆ ಸಮಿತಿ ರಾಜ್ಯಾಧ್ಯಕ್ಷ ಸೇರಿ ನಾಲ್ವರನ್ನು ಇಲ್ಲಿನ ಆಡುಗೋಡಿ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಜಯನಗರದ 6ನೆ ಬ್ಲಾಕ್‌ನ ನಿವಾಸಿ, ಸಮಿತಿಯ ರಾಜ್ಯಾಧ್ಯಕ್ಷ ಮಂಜುನಾಥ ರೆಡ್ಡಿ (36), ಜೆಪಿ ನಗರದ ಲೋಕೇಶ್ (38), ಯಡಿಯೂರಿನ ಅಂಜನಮೂರ್ತಿ (40), ಬ್ಯಾಟರಾಜ್ (30) ಬಂಧಿತ ಆರೋಪಿಗಳಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ತ್ಯಾಗರಾಜನಗರದಲ್ಲಿ ರಾಜ್ಯ ಮಾನವ ಹಕ್ಕುಗಳ ಸಮಿತಿಯ ಕಚೇರಿ ತೆರೆದಿದ್ದ ಆರೋಪಿ ಮಂಜುನಾಥ ರೆಡ್ಡಿ, ತನ್ನ ಐವರು ಸ್ನೇಹಿತರೊಂದಿಗೆ ಸೇರಿಕೊಂಡು ನಗರದಲ್ಲಿ ಕೆಲವರಿಗೆ ವಂಚಿಸುವ ಕಾಯಕದಲ್ಲಿ ನಿರತನಾಗಿದ್ದ ಎನ್ನಲಾಗಿದೆ. ಇತ್ತೀಚೆಗೆ ರಕ್ತಸ್ರಾವದಿಂದ ಬಳಲುತ್ತಿದ್ದ ವಿದ್ಯಾರ್ಥಿನಿಯೊಬ್ಬರು ದೀಪ್ತಿ ನರ್ಸಿಂಗ್ ಹೋಂಗೆ ಚಿಕಿತ್ಸೆಗಾಗಿ ತೆರಳಿದ್ದು, ಇದನ್ನು ಗಮನಿಸಿದ ಆರೋಪಿಗಳು ಚಿಕಿತ್ಸೆ ನೀಡುವ ವೇಳೆ ನರ್ಸಿಂಗ್ ಹೋಂಗೆ ನುಗ್ಗಿ ವೈದ್ಯೆಯಾದ ಡಾ.ಇಂದ್ರಸೇನಾ ಅವರನ್ನು ಬೆದರಿಸಿದ್ದಾರೆ.
ಬಳಿಕ ವಿದ್ಯಾರ್ಥಿನಿಗೆ ಗರ್ಭಪಾತ ಮಾಡಿದ ಹಿನ್ನೆಲೆಯಲ್ಲಿ ನಿಮ್ಮ ಮೇಲೆ ಪ್ರಕರಣ ದಾಖಲಿಸಿ ಬಂಧಿಸಲು ಕ್ರಮ ಕೈಗೊಳ್ಳಬೇಕಾಗುತ್ತೆ ಎಂದು ಸಮಿತಿಯ ಹೆಸರಿನಲ್ಲಿ ಬೆದರಿಸಿದ್ದಾರೆ. ಇದರಿಂದ ಆತಂಕಗೊಂಡ ವೈದ್ಯೆ ಹಣ ನೀಡುವುದಾಗಿ ತಿಳಿಸಿದ್ದಾರೆ. ಆರೋಪಿಗಳು ಪ್ರಕರಣ ದಾಖಲಿಸದಂತೆ ನೋಡಿಕೊಳ್ಳಲು 10 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದಾರೆ. ನಂತರ 2.5 ಲಕ್ಷಕ್ಕೆ ಇಳಿಸಿ ನರ್ಸಿಂಗ್ ಹೋಂನಲ್ಲಿ ಸಂಗ್ರಹವಾಗಿದ್ದ 60 ಸಾವಿರ ದೋಚಿ ಪರಾರಿಯಾಗಿದ್ದರು. ಮರುದಿನ ಉಳಿದ ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು ಎಂದ ಆರೋಪಿಸಿ ಇಂದ್ರಸೇನಾ ಅವರ ಪತಿ ಡಾ.ಶ್ರೀನಿವಾಸ್ ರೆಡ್ಡಿ ಪೊಲೀಸರಿಗೆ ದೂರು ನೀಡಿದ್ದರು.
ಈ ಬಗ್ಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಇನ್ನು ಕೃತ್ಯದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿರುವ ರೌಡಿಗಳಾದ ಉಮೇಶ್ ಹಾಗೂ ನವೀನ್‌ಗಾಗಿ ಪತ್ತೆಕಾರ್ಯ ಮುಂದುವರೆಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.







