2018ರ ಐಪಿಎಲ್‌ನಲ್ಲಿ ಕೆಕೆಆರ್ ತಂಡದಲ್ಲಿ ಧೋನಿ?

ಕೋಲ್ಕತಾ, ಎ.26: ದಕ್ಷ ನಾಯಕತ್ವ ಹಾಗೂ ಅಂತಿಮ ಕ್ಷಣದಲ್ಲೂ ತಂಡಕ್ಕೆ ಗೆಲುವು ತಂದುಕೊಡಬಲ್ಲ ಸಾಮರ್ಥ್ಯವಿರುವ ಎಂ.ಎಸ್. ಧೋನಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕನಾಗಿದ್ದಾಗ ಆ ತಂಡ ಐಪಿಎಲ್‌ನಲ್ಲಿ ಪ್ರಾಬಲ್ಯ ಸಾಧಿಸಿತ್ತು. ಧೋನಿ ಪುಣೆ ತಂಡದ ನಾಯಕನಾಗಿ ಕಳೆದ ವರ್ಷ ವಿಫಲರಾಗಿದ್ದರು. ಈ ವರ್ಷ ಸ್ಟೀವನ್ ಸ್ಮಿತ್‌ಗೆ ನಾಯಕತ್ವ ಹಸ್ತಾಂತರಿಸಲಾಗಿತ್ತು.
ಚೆನ್ನೈ ಹಾಗೂ ರಾಜಸ್ಥಾನ ತಂಡಗಳು 2 ವರ್ಷ ನಿಷೇಧ ಎದುರಿಸಿದ್ದ ಕಾರಣ ಆ ತಂಡಗಳ ಬದಲಿಗೆ ಅವಕಾಶ ಪಡೆದಿದ್ದ ಆರ್‌ಪಿಎಸ್ ಹಾಗೂ ಗುಜರಾತ್ ಲಯನ್ಸ್ ತಂಡಗಳು ಮುಂದಿನ ಆವೃತ್ತಿಯಲ್ಲಿ ಇರುತ್ತವೆಯೋ ಎಂಬ ಬಗ್ಗೆ ಸ್ಪಷ್ಟತೆಯಿಲ್ಲ. ಧೋನಿ ಚೆನ್ನೈಗೆ ಸೇರುತ್ತಾರೊ? ಅಥವಾ ಹರಾಜು ಪ್ರಕ್ರಿಯೆಗೆ ಒಳಗಾಗುತ್ತಾರೊ? ಎಂಬ ಪ್ರಶ್ನೆ ಕ್ರಿಕೆಟ್ ಅಭಿಮಾನಿಗಳನ್ನು ಕಾಡುತ್ತಿದೆ.
ಎಲ್ಲ ಫ್ರಾಂಚೈಸಿಗಳು ಧೋನಿಯೊಂದಿಗೆ ಒಪ್ಪಂದ ಮಾಡಿಕೊಳ್ಳಲು ಮುಂದಾಗಲಿವೆ ಎನ್ನುವ ಬಗ್ಗೆ ಯಾವುದೇ ಸಂಶಯವಿಲ್ಲ. ಕೋಲ್ಕತಾ ನೈಟ್ ರೈಡರ್ಸ್ ತಂಡದ ಸಹ ಮಾಲಕ ಶಾರೂಕ್‌ಖಾನ್ ಈ ಬಗ್ಗೆ ಆಸಕ್ತಿ ವ್ಯಕ್ತಪಡಿಸಿದ್ದಾರೆ.
‘‘ಎಂಎಸ್ ಧೋನಿಯನ್ನು ಖರೀದಿಸಲು ನನ್ನ ಪೈಜಾಮನ್ನು ಮಾರಾಟ ಮಾಡಲು ತಯಾರಿದ್ದೇನೆ. ಧೋನಿ ಹರಾಜಿನಲ್ಲಿದ್ದರೆ ಮಾತ್ರ ಇದು ಸಾಧ್ಯ’’ ಎಂದು ಪ್ರಶ್ನೆಯೊಂದಕ್ಕೆ ಖಾನ್ ಉತ್ತರಿಸಿದ್ದಾರೆ





