ಕೆಂಪನೊಟ್ಟು: ಅಕ್ರಮ ಕಪ್ಪು ಕಲ್ಲಿನ ಕೋರೆ ಸ್ಥಗಿತಗೊಳಿಸಲು ಒತ್ತಾಯ

ಬೆಳ್ತಂಗಡಿ, ಎ.26: ಬೆಳ್ತಂಗಡಿ ತಾಲೂಕಿನ ಕುದ್ಯಾಡಿ ಗ್ರಾಮದ ಕೆಂಪನೊಟ್ಟು ಎಂಬಲ್ಲಿ ಅನಧಿಕೃತವಾಗಿ ಕಪ್ಪು ಕಲ್ಲಿನ ಕೋರೆಯೊಂದು ಜನವಸತಿ ಪ್ರದೇಶಗಳ ನಡುವೆಯೇ ನಡೆಯುತ್ತಿದ್ದು, ಅದರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸ್ಥಳೀಯ ನಾಗರಿಕರು ಒತ್ತಾಯಿಸುತ್ತಿದ್ದಾರೆ.
ಕುದ್ಯಾಡಿ ಗ್ರಾಮದ ಸರ್ವೆ ನಂ. 66/3, 66/2 ಮತ್ತು 28/1ರಲ್ಲಿ ಈ ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದು, ಇದು ವಿವಾದಿತ ಜಮೀನಾಗಿದೆ. ಇದರ ಬಗ್ಗೆ ನ್ಯಾಯಾಲಯದಲ್ಲಿ ಪ್ರಕರಣ ನಡೆಯತ್ತಿರುವಾಗಲೇ ಅವ್ಯಾಹತವಾಗಿ ಗಣಿಗಾರಿಕೆಯನ್ನು ಮಾಡಲಾಗುತ್ತಿದೆ ಎಂದು ಆರೋಪಿಸಲಾಗಿದೆ. ಸಮೀಪದಲ್ಲಿಯೇ ಮನೆಗಳಿದ್ದರೂ ಕೂಡಾ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಯಾವುದೇ ಪರವಾನಿಗೆ ಇಲ್ಲದೆ ಅನಧಿಕೃತವಾಗಿ ಕಪ್ಪು ಕಲ್ಲಿನ ಕೋರೆ ನಡೆಸಲಾಗುತ್ತಿದೆ. ಅಲ್ಲದೆ ಯಾವುದೇ ಪರವಾನಿಗೆ ಇಲ್ಲದೆ ಸ್ಪೋಟಕವನ್ನು ಬಳಸುತ್ತಿದ್ದಾರೆ. ಇದರಿಂದಾಗಿ ಪರಿಸರದ ಜನರ ಕೃಷಿಗೆ ತೀವ್ರ ಹಾನಿಯಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಸರಕಾರ ಹಾಗೂ ಅಧಿಕಾರಿಗಳು ಕೂಡಲೇ ಎಚ್ಚೆತ್ತು ತಕ್ಷಣ ಅನಧಿಕೃತ ಕಪ್ಪು ಕಲ್ಲಿನ ಕೋರೆಯನ್ನು ನಿಲ್ಲಿಸದಿದ್ದರೆ ನಾಗರಿಕರ ಸಹಕಾರದೊಂದಿಗೆ ಪ್ರತಿಭಟನೆ ನಡೆಸಬೇಕಾದೀತೆಂದು ಸ್ಥಳೀಯ ಸಾಮಾಜಿಕ ಹೋರಾಟಗಾರ ಲೋಕೇಶ್ ಪೂಜಾರಿ ಎಚ್ಚರಿಕೆ ನೀಡಿದ್ದಾರೆ.





