ಬೇಡಿಕೆ ಪರಿಗಣಿಸುವ ಭರವಸೆ: ಮುಷ್ಕರ ಹಿಂಪಡೆದ ನಿವೇಶನರಹಿತರು
ಮಂಗಳೂರು, ಎ.26: ಬೇಡಿಕೆಗಳನ್ನು ಮುಂದಿಟ್ಟು ನಿವೇಶನರಹಿತರ ಹೋರಾಟ ಸಮಿತಿಯ ವತಿಯಿಂದ ನಿವೇಶನರಹಿತರು ಸೋಮವಾರದಿಂದ ಮನಪಾ ಕಟ್ಟಡ ಎುರು ಹಮ್ಮಿಕೊಂಡಿರುವ ಅನಿರ್ದಿಷ್ಟಾವಧಿ ಮುಷ್ಕರವನ್ನು ಹಿಂಪಡೆಯಲಾಗಿದೆ ಎಂದು ಸಮಿತಿಯ ಪ್ರ.ಕಾರ್ಯದರ್ಶಿ ಸಂತೋಷ್ ಶಕ್ತಿನಗರ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಮನಪಾ ಆಯುಕ್ತರು ಬೇಡಿಕೆಗಳನ್ನು ಪರಿಗಣಿಸುವ ಬಗ್ಗೆ ಲಿಖಿತ ಭರವಸೆ ನೀಡಿರುವ ಈ ಹಿನ್ನೆಲೆಯಲ್ಲಿ ಮುಷ್ಕರವನ್ನು ಮಂಗಳವಾರ ರಾತ್ರಿ ಹಿಂಪಡೆಯಲಾಗಿದೆ ಎಂದರು.
ಶಕ್ತಿನಗರ ಇಡ್ಯಾ ಸುರತ್ಕಲ್‌ನಲ್ಲಿ ಮನೆ ನಿರ್ಮಿಸುವ ದಿನಾಂಕವನ್ನು ಲಿಖಿತ ರೂಪದಲ್ಲಿ ನೀಡಬೇಕು. ಆಯ್ಕೆ ಮಾಡಿದ 2,000 ನಿವೇಶನರಹಿತರ ಪಟ್ಟಿಯಲ್ಲಿರುವ ಅರ್ಹರನ್ನು ತಕ್ಷಣ ಕೈಬಿಡಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಮುಂದಿಟ್ಟು ಸಮಿತಿ ಅನಿರ್ದಿಷ್ಟಾವಧಿ ಮುಷ್ಕರ ಹಮ್ಮಿಕೊಂಡಿತ್ತು ಎಂದರು.
ನಿವೇಶನರಹಿತರ ಬೇಡಿಕೆಗಳನ್ನು ಪರಿಗಣಿಸಿರುವ ಪಾಲಿಕೆ ಆಯುಕ್ತರು ಪದವು ಶಕ್ತಿನಗರದಲ್ಲಿ ‘ಜಿ’ ಪ್ಲಸ್ 3 ಮಾದರಿ ಮನೆ ನಿರ್ಮಾಣಕ್ಕೆ ಕೇಂದ್ರ ಹಾಗೂ ರಾಜ್ಯ ಸರಕಾರಗಳಿಂದ ಆಡಳಿತಾತ್ಮಕ ಅನುಮೋದನೆ ದೊರಕಿದೆ. ಅಂದಾಜುಪಟ್ಟಿ ತಯಾರಿಸಿ ಸಕ್ಷಮ ಪ್ರಾಧಿಕಾರದಿಂದ ಅನುಮೋದನೆ ಪಡೆಯಲು ಒಂದು ತಿಂಗಳ ಕಾಲಾವಕಾಶಬೇಕಿದ್ದು, ಅನಂತರ ಟೆಂಡರ್ ಪ್ರಕ್ರಿಯೆಗೆ 2 ತಿಂಗಳು ಕಾಲಾವಕಾಶ ಬೇಕಾಗುತ್ತದೆ. ಅಲ್ಲದೆ, ಅನರ್ಹರ ಬಗ್ಗೆ ಸ್ಥಳ ಪರಿಶೀಲನೆ ನಡೆಸಿ ವರದಿ ತಯಾರಿಸಲಾಗಿದ್ದು, ಈ ವರದಿಯನ್ನು ಆಯ್ಕೆ ಸಮಿತಿಯಲ್ಲಿ ಮಂಡಿಸಿ ಮುಂದಿನ ಕ್ರಮ ಜರಗಿಸುವುದಾಗಿ ಆಯುಕ್ತರು ಭರವಸೆ ನೀಡಿದ್ದಾರೆ ಎಂದವರು ಮಾಹಿತಿ ನೀಡಿದರು.
ಅಲ್ಲದೆ, ಪ್ರಥಮ ಹಂತದಲ್ಲಿ ಕೈಗೊಂಡ ಯೋಜನೆಯ ಪ್ರಕ್ರಿಯೆ ಮುಕ್ತಾಯವಾದ ಕೂಡಲೇ ಎರಡನೆ ಹಂತದಲ್ಲಿ ಕಣ್ಣೂರಿನ ಕನ್ನಗುಡ್ಡೆಯ 11.25 ಎಕರೆ ಜಾಗಕ್ಕೆ ಅರ್ಹ ನಿವೇಶನರಹಿತರನ್ನು ಆಯ್ಕೆ ಮಾಡುವುದಾಗಿಯೂ ಆಯುಕ್ತರು ಲಿಖಿತ ಭರವಸೆ ನೀಡಿರುವ ಹಿನ್ನೆಲೆಯಲ್ಲಿ ಮುಷ್ಕರವನ್ನು ಹಿಂದಕ್ಕೆ ಪಡೆಯಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಹೋರಾಟ ಸಮಿತಿಯ ಅಧ್ಯಕ್ಷ ಪ್ರೇಮನಾಥ ಜಲ್ಲಿಗುಡ್ಡೆ, ಪದಾಧಿಕಾರಿಗಳಾದ ಪ್ರಭಾವತಿ ಬೋಳೂರು, ನೂತನ್ ಕೊಂಚಾಡಿ ಉಪಸ್ಥಿತರಿದ್ದರು.







