ದೆಹಲಿಯನ್ನು ಬೆಚ್ಚಿಬೀಳಿಸಿದ ಮತ್ತೊಂದು ರೇಪ್: ಕಾರಿನಲ್ಲಿ ಸ್ನೇಹಿತನಿಂದಲೇ ಕೃತ್ಯ

ಗ್ರೇಟರ್ ನೋಯ್ಡ, ಎ.27: ಇಲ್ಲಿನ ನೋಯ್ಡಾ ಇಂಟರ್‌ನ್ಯಾಷನಲ್ ಯೂನಿವರ್ಸಿಟಿ ವಿದ್ಯಾರ್ಥಿನಿಯೊಬ್ಬರನ್ನು ಕಾರಿನಲ್ಲಿ ಆಕೆಯ ಸ್ನೇಹಿತನೇ ಅತ್ಯಾಚಾರ ಮಾಡಿರುವ ಘಟನೆ ನಡೆದಿದೆ. ಡ್ರಾಪ್ ನೀಡುವ ನೆಪದಲ್ಲಿ ವಿದ್ಯಾರ್ಥಿನಿಯನ್ನು ಕಾರಿನಲ್ಲಿ ಕೂರಿಸಿಕೊಂಡು ಬುದ್ಧ ಇಂಟರ್‌ನ್ಯಾಷನಲ್ ಸರ್ಕ್ಯೂಟ್ ಬಳಿ ಅತ್ಯಾಚಾರ ಎಸಗಿದ್ದಾನೆ ಎಂದು ಸಂತ್ರಸ್ತೆ ದೂರು ನೀಡಿದ್ದಾಳೆ.
ಗ್ರೇಟರ್ ನೋಯ್ಡದ ಮುರ್ಶಾದ್‌ಪುರ ನಿವಾಸಿ ಹಾಗೂ ಬಿ-ಟೆಕ್ ಪದವೀಧರನಾಗಿದ್ದ ಆರೋಪಿ, ತನ್ನ ಸ್ನೇಹಿತೆಯನ್ನು ಎನ್‌ಐಯು ಕ್ಯಾಂಪಸ್‌ಗೆ ಬಿಡಲು ಬರುತ್ತಿದ್ದ. ಹೀಗೆ ಬಂದಿದ್ದಾಗ ಕಳೆದ ನವೆಂಬರ್‌ನಲ್ಲಿ ಈ ವಿದ್ಯಾರ್ಥಿನಿಯ ಪರಿಚಯವಾಗಿದೆ. ಆರೋಪಿ ಬೆಂಗಳೂರಿನ ಖಾಸಗಿ ಕಾಲೇಜಿನಲ್ಲಿ ಎಂಜಿನಿಯರಿಂಗ್ ಪದವಿ ಪಡೆದು ಹುಟ್ಟೂರಿಗೆ ಮರಳಿದ್ದ. ಸಾಮಾಜಿಕ ಜಾಲತಾಣ ಖಾತೆಗಳಲ್ಲೂ ಇಬ್ಬರು ಸ್ನೇಹಿತರಾಗಿದ್ದರು. ಆರೋಪಿ ಆಕೆಗೆ ವಿವಾಹ ಪ್ರಸ್ತಾಪ ಮುಂದಿಟ್ಟಿದ್ದ. ಆದರೆ ಅದನ್ನು ಯುವತಿ ತಿರಸ್ಕರಿಸಿದ್ದಳು. ಆದರೂ ಆಕೆಯ ಜತೆ ಸಾಮಾಜಿಕ ಜಾಲ ತಾಣ ಮೂಲಕ ಸಂಪರ್ಕದಲ್ಲಿದ್ದ.
ಮಂಗಳವಾರ ಸಂಜೆ ಎನ್‌ಐಯು ಕ್ಯಾಂಪಸ್ ಗೇಟ್‌ನ ಹೊರಗೆ ಯಮುನಾ ಎಕ್ಸ್‌ಪ್ರೆಸ್ ಹೈವೇಯಲ್ಲಿ ಯುವತಿ ಬಸ್ ಗಾಗಿ ಕಾಯುತ್ತಿದ್ದಾಗ ಬಂದ ಆರೋಪಿ ತನ್ನ ಕಾರಿನಲ್ಲಿ ಡ್ರಾಪ್ ಮಾಡುವುದಾಗಿ ತಿಳಿಸಿದ. ಕಾರಿನಲ್ಲಿ ಚಾಲಕ ಹಾಗೂ ಮತ್ತೊಬ್ಬ ವ್ಯಕ್ತಿಯೂ ಇದ್ದ ಎಂದು ಯುವತಿ ದೂರು ನೀಡಿದ್ದಾಳೆ.
ಆಕೆಯ ಮೇಲೆ ಬಲಾತ್ಕಾರಕ್ಕೆ ಮುಂದಾದಾಗ ಪ್ರತಿರೋಧ ತೋರಿದ ಯುವತಿ ಪೊಲೀಸರಿಗೆ ಕರೆ ಮಾಡುವ ಪ್ರಯತ್ನ ಮಾಡಿದಳು. ಆದರೆ ಆತನ ಸ್ನೇಹಿತ ಮೊಬೈಲ್ ಕಿತ್ತುಕೊಂಡಿದ್ದಾನೆ. ನಂತರ ನಿರ್ಜನ ಪ್ರದೇಶದಲ್ಲಿ ವಾಹನ ನಿಲ್ಲಿಸಿ, ಇತರ ಇಬ್ಬರನ್ನು ಕೆಳಕ್ಕೆ ಇಳಿಯಲು ಸೂಚಿಸಿದ ಯುವತಿಯ ಸ್ನೇಹಿತ ಬಾಗಿಲು ಹಾಗೂ ಕಿಟಕಿ ಲಾಕ್ ಮಾಡಿ ಅತ್ಯಾಚಾರ ಎಸಗಿದ್ದಾನೆ. ಬಳಿಕ ಗಲ್ಗೋತಿಯಾಸ್ ವಿವಿ ಬಸ್ ನಿಲ್ದಾಣದಲ್ಲಿ ಆಕೆಯನ್ನು ಡ್ರಾಪ್ ಮಾಡಿ ತೆರಳಿದ್ದಾನೆ ಎಂದು ವಿದ್ಯಾರ್ಥಿನಿ ದೂರಿನಲ್ಲಿ ವಿವರಿಸಿದ್ದಾಳೆ.
ಸ್ನೇಹಿತೆಯರ ಮೂಲಕ ಲೈಂಗಿಕ ದೌರ್ಜನ್ಯ ಬಗ್ಗೆ ಪೊಲೀಸರಿಗೆ ತಕ್ಷಣ ದೂರು ನೀಡಿದರೂ, ಬುಧವಾರ ಸಂಜೆ ಕುಟುಂಬದ ಜತೆ ದನಕೌರ್ ಠಾಣೆಗೆ ಭೇಟಿ ನೀಡಿದ ಬಳಿಕವಷ್ಟೇ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ. ತಕ್ಷಣ ಆತನನು ಬಂಧಿಸುವಂತೆ ಸಂತ್ರಸ್ತೆಯ ತಂದೆ ಆಗ್ರಹಿಸಿದ್ದಾರೆ.
ಆರೋಪಿ ವಿರುದ್ಧ ಭಾರತೀಯ ದಂಡಸಂಹಿತೆಯ ಸೆಕ್ಷನ್ 376ರ ಅನ್ವಯ ಪ್ರಕರಣ ದಾಖಲಿಸಿಕೊಂಡಿದ್ದು, ತಲೆಮರೆಸಿಕೊಂಡಿರುವ ಆತನ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪೊಲೀಸ್ ಮೂಲಗಳು ಹೇಳಿವೆ.