ಶಿಕ್ಷಕರ ಜಾತಿ, ಧರ್ಮ, ಆಧಾರ್ ದಾಖಲೆ ಕೇಳಿದ ಕೇಂದ್ರ

ಹೊಸದಿಲ್ಲಿ, ಎ.27: ನಕಲಿ ಅಧ್ಯಾಪಕರನ್ನು ಪತ್ತೆ ಮಾಡುವ ಮತ್ತು ರಾಷ್ಟ್ರೀಯ ಶಿಕ್ಷಕರ ಪೋರ್ಟೆಲ್ ಅಭಿವೃದ್ಧಿಪಡಿಸುವ ದೃಷ್ಟಿಯಿಂದ ಕೇಂದ್ರದ ಮಾನವ ಸಂಪನ್ಮೂಲ ಸಚಿವಾಲಯ ಶಿಕ್ಷಕರು ಮತ್ತು ಪ್ರಾಧ್ಯಾಪಕರ ಧರ್ಮ, ಜಾತಿ, ಆಧಾರ್ ಸಂಖ್ಯೆ ಹಾಗೂ ದೂರವಾಣಿ ಸಂಖ್ಯೆ ಸೇರಿದಂತೆ ಸಮಗ್ರ ವಿವರ ನೀಡುವಂತೆ ಸೂಚಿಸಿದೆ.
ದೇಶದ ಎಲ್ಲ 15 ಲಕ್ಷ ಕಾಲೇಜು ಮತ್ತು ವಿಶ್ವವಿದ್ಯಾನಿಲಯ ಪ್ರಾಧ್ಯಾಪಕರಿಗೆ ಇದು ಅನ್ವಯವಾಗಲಿದೆ. ಕಳೆದ ನಾಲ್ಕು ತಿಂಗಳಿನಿಂದ ಮಾಹಿತಿ ಸಂಗ್ರಹ ಪ್ರಕ್ರಿಯೆ ನಡೆಯುತ್ತಿದ್ದು, ಈಗಾಗಲೇ ಶೇಕಡ 60ರಷ್ಟು ಮಾಹಿತಿ ಸಂಗ್ರಹವಾಗಿದೆ. ಇದುವರೆಗೆ ಮಾಹಿತಿ ಸಲ್ಲಿಸದ ಪ್ರಾಧ್ಯಾಪಕರಿಗೆ ಒಂದು ತಿಂಗಳ ಗಡುವು ನೀಡಲಾಗಿದೆ. ಮುಂದಿನ ವರ್ಷ ವಿದ್ಯಾರ್ಥಿಗಳ ಮಾಹಿತಿಯನ್ನೂ ಸಂಗ್ರಹಿಸಲು ಉದ್ದೇಶಿಸಲಾಗಿದೆ ಎಂದು ಉನ್ನತ ಮೂಲಗಳು ಹೇಳಿವೆ.
"ಹಲವು ಮಂದಿ ನಕಲಿ ಪ್ರಾಧ್ಯಾಪಕರಿದ್ದಾರೆ ಎಂಬ ಸಂಶಯವಿದೆ. ಕೆಲ ಬೋಧಕರನ್ನು ಹಲವು ಕಾಲೇಜುಗಳಲ್ಲಿ ಕೆಲಸ ಮಾಡುತ್ತಿರುವುದಾಗಿ ಬಿಂಬಿಸಲಾಗಿದೆ. ಇವರ ಪತ್ತೆಗೆ ಆಧಾರ್ ಸಂಖ್ಯೆ ನೆರವಾಗಲಿದೆ" ಎಂದು ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಆರ್.ಸುಬ್ರಹ್ಮಣ್ಯ ಹೇಳಿದ್ದಾರೆ.
ಜಾತಿ ಮತ್ತು ಧರ್ಮದ ವಿವರ ನೀಡುವಂತೆ ಸೂಚಿಸಿರುವ ಬಗ್ಗೆ ಗಮನ ಸೆಳೆದಾಗ, ಇದರಿಂದ ನಕಲಿ ಪ್ರಾಧ್ಯಾಪಕರ ಪತ್ತೆಗೆ ನೆರವಾಗದು. ಆದರೆ ಇದು ಸಮೀಕ್ಷೆಯ ಭಾಗವಾಗಿರುತ್ತದೆ ಎಂದು ಸಬೂಬು ಹೇಳಿದರು. 2010-11ರಿಂದ ಸರ್ಕಾರ ವಾರ್ಷಿಕ ಅಖಿಲ ಭಾರತ ಉನ್ನತ ಶಿಕ್ಷಣ ಸಮೀಕ್ಷೆ ನಡೆಸುತ್ತಿದ್ದರೂ, ವೈಯಕ್ತಿಕ ವಿವರಗಳನ್ನು ಪಡೆಯುತ್ತಿರುವುದು ಇದೇ ಮೊದಲು.