ಚುನಾವಣಾ ವಿಜಯೋತ್ಸವದ ಫೋಟೊ ತೋರಿಸಿ ಸುಕ್ಮಾ ದಾಳಿಗೆ ಜೆಎನ್ ಯುನಲ್ಲಿ ಸಂಭ್ರಮ ಎಂದು ವರದಿ ಮಾಡಿದ ವೆಬ್ ಸೈಟ್ !
ಸತ್ಯದ ತಲೆಗೆ ಹೊಡೆಯುವ ಸುಳ್ಳು ಸುದ್ದಿ

ಹೊಸದಿಲ್ಲಿ, ಎ.27: ಛತ್ತೀಸ್ ಗಢದ ಸುಕ್ಮಾ ಜಿಲ್ಲೆಯಲ್ಲಿ ನಕ್ಸಲ್ ದಾಳಿಗೆ 25 ಸಿಆರ್ ಪಿಎಫ್ ಜವಾನರು ಬಲಿಯಾದ ಘಟನೆ ನಡೆದ ಮರುದಿನ ಹಿಂದುತ್ವ ವೆಬ್ ಸೈಟ್ ಒಂದು ಚುನಾವಣಾ ವಿಜಯೋತ್ಸವದ ಫೋಟೋ ಒಂದನ್ನು ಪ್ರಕಟಿಸಿ ಸುಕ್ಮಾ ದಾಳಿಗೆ ಜೆಎನ್ ಯುನಲ್ಲಿ ಸಂಭ್ರಮಾಚರಣೆ ಎಂದು ವರದಿ ಮಾಡಿದೆ.
"ಸೃಷ್ಟಾ ನ್ಯೂಸ್" ಎಂಬ ಹೆಸರಿನ ಈ ವೆಬ್ ಸೈಟ್ ತನ್ನ ಧ್ಯೇಯೋದ್ದೇಶ ‘ವಸುಧೈವ ಕುಟುಂಬಕಂ’ ಎಂದು ಬಣ್ಣಿಸಿದೆಯಲ್ಲದೆ ನಕ್ಸಲರು ಜವಾನರ ಮೇಲೆ ದಾಳಿ ನಡೆಸಿದಾಗಲೆಲ್ಲಾ ಜೆಎನ್ ಯುನಲ್ಲಿ ವಿದ್ಯಾರ್ಥಿ ಗುಂಪುಗಳು ಸಂಭ್ರಮಾಚರಣೆ ಮಾಡುತ್ತವೆ ಎಂದು ಹೇಳಿಕೊಂಡಿದೆ.
ಜೆಎನ್ ಯು ಕ್ಯಾಂಪಸ್ಸಿನೊಳಗಡೆಯಿರುವ ಹಲವಾರು ಗೋಡೆ ಬರಹಗಳು ಮತ್ತು ಪೋಸ್ಟರುಗಳಲ್ಲಿ ನಕ್ಸಲ್ ಚಳುವಳಿ ಬಗ್ಗೆ ಉಲ್ಲೇಖವಿರುವುದರ ಫೋಟೋಗಳನ್ನೂ ವೆಬ್ ಸೈಟ್ ಪ್ರಕಟಿಸಿ ತನ್ನ ಹೇಳಿಕೆಯನ್ನು ಸಮರ್ಥಿಸಿಕೊಂಡಿದೆ. ಹಿರಿಯ ಪತ್ರಕರ್ತ ರಾಜದೀಪ್ ಸರ್ದೇಸಾಯಿ ಈ ವೆಬ್ ಸೈಟ್ ನಲ್ಲಿ ಪ್ರಕಟವಾದ ನಕಲಿ ಸುದ್ದಿಯ ಸ್ಕ್ರೀನ್ ಶಾಟ್ ಒಂದನ್ನು ಟ್ವೀಟ್ ಮಾಡಿದ್ದಾರಲ್ಲದೆ ‘‘ 2015 ಜೆ ಎನ್ ಯು ಚುನಾವಣಾ ಫಲಿತಾಂಶದ ನಂತರದ ಫೋಟೋವೊಂದು ಬಲಪಂಥೀಯ ವೆಬ್ ಸೈಟ್ ನಲ್ಲಿ ಹಾಕಿ ಸುಕ್ಮಾ ದಾಳಿಗೆ ಕ್ಯಾಂಪಸ್ಸಿನಲ್ಲಿ ಸಂಭ್ರಮಾಚರಣ ನಡೆಯುತ್ತಿದೆ ಎಂದು ಹೇಳಲಾಗಿದೆ!’’ ಎಂದು ಬರೆದಿದ್ದಾರೆ.
ಜೆ ಎನ್ ಯು ವಿದ್ಯಾರ್ಥಿ ನಾಯಕ ಉಮರ್ ಖಾಲಿದ್ ಈ ವೆಬ್ ಸೈಟ್ ಸುದ್ದಿಯನ್ನು ನಿರಾಕರಿಸಿದ್ದು ಅವುಗಳು ಹಿಂದಿನ ಚುನಾವಣಾ ವಿಜಯೋತ್ಸವ ಆಚರಣೆಯ ಫೋಟೋಗಳು ಎಂಬುದನ್ನು ದೃಢೀಕರಿಸಿದ್ದಾರೆ.