ಇಲ್ಲಿ ಒಂದೇ ಸೂರಿನಡಿ ಹಿಂದೂ-ಮುಸ್ಲಿಮರಿಂದ ಪ್ರಾರ್ಥನೆ!

ಆಲ್ವಾರ್, ಎ.27: ರಾಜಸ್ಥಾನದ ಆಲ್ವಾರ್ ಜಿಲ್ಲೆಯಲ್ಲಿ ಶತಮಾನಗಳಿಂದ ಹಿಂದೂಗಳು ಮತ್ತು ಮುಸ್ಲಿಮರು ಶಾಂತಿ ಸಾಮರಸ್ಯದ ಬಾಳ್ವೆ ನಡೆಸುತ್ತಾ ಇತರರಿಗೆ ಮಾದರಿಯಾಗಿದ್ದಾರೆ. ಇಲ್ಲಿನ ಮೋತಿ ಡೋಂಗ್ರಿ ಬೆಟ್ಟದ ಮೇಲಿರುವ ಸೈಯದ್ ದರ್ಬಾರ್ ಹಾಗೂ ಸಂಕಟ ಮೋಚನ್ ವೀರ್ ಹನುಮಾನ್ ಮಂದಿರವು ಭಕ್ತಿ, ಭಾವುಕತೆಯ ಜತೆ ಮತೀಯ ಸೌಹಾರ್ದದ ಸಂಕೇತವಾಗಿಯೂ ಹೊರಹೊಮ್ಮಿದೆ. ಗೋ ರಕ್ಷಕರಿಂದ ನಡೆದ ಪೆಹ್ಲು ಖಾನ್ ಹತ್ಯೆ ಘಟನೆಯ ಹಿನ್ನೆಲೆಯಲ್ಲಿ ಈ ಧಾರ್ಮಿಕ ಕ್ಷೇತ್ರ ಇನ್ನೂ ಹೆಚ್ಚು ಪ್ರಾಮುಖ್ಯತೆ ಪಡೆದಿದೆ.
ಈ ಕ್ಷೇತ್ರಗಳ ವಿಶೇಷತೆಯೇನೆಂದರೆ ಎರಡೂ ವಿಭಿನ್ನ ಧರ್ಮದ ಮಂದಿರಗಳನ್ನು ಪ್ರತ್ಯೇಕಿಸುವ ಗೋಡೆಯಿಲ್ಲ. ಪ್ರತಿ ಗುರುವಾರ ದೇವಳದಲ್ಲಿ ಭಜನೆಗಳು ಮುಗಿದೊಡನೆಯೇ ಅದೇ ಮೈಕ್ರೊಫೋನ್, ಧ್ವನಿವರ್ಧಕಗಳು ಢೋಲಕ್ ಮತ್ತು ಹಾರ್ಮೋನಿಯಂ ಉಪಯೋಗಿಸಿ ಇನ್ನೊಂದು ಕ್ಷೇತ್ರದಲ್ಲಿ ಖವ್ವಾಲಿಗಳನ್ನು ಹಾಡಲಾಗುತ್ತದೆ. ಈ ಧಾರ್ಮಿಕ ಸ್ಥಳಗಳ ಆವರಣದಲ್ಲಿ ಕೇಸರಿ ಮತ್ತು ಹಸಿರು ಧ್ವಜಗಳು ಒಟ್ಟೊಟ್ಟಾಗಿ ಹಾರಾಡುತ್ತಿವೆ. ಅಷ್ಟೇ ಅಲ್ಲ ಈ ಬೆಟ್ಟದ ಮೇಲೆ 30 ಮೀಟರ್ ಎತ್ತರದಲ್ಲಿ ತ್ರಿವರ್ಣ ಧ್ವಜ ಕೂಡ ಹಾರಾಡುತ್ತಿದೆ.
ದೇವಳದ ಮಹಾ ಆರತಿ ಸಂದರ್ಭ ಕರ್ಪೂರ ಹಾಗೂ ತುಪ್ಪ ದೀಪಗಳಿಂದ ಹೊರಸೂಸುವ ಹೊಗೆ ದರ್ಗಾದಲ್ಲಿ ಉರಿಸಲಾಗುವ ಲೋಬನದ ಪರಿಮಳದೊಂದಿಗೆ ಸೇರಿದಾಗ ಹೊರಹೊಮ್ಮುವ ಸುವಾಸನೆ ವರ್ಣನಾತೀತ ಎಂದು ಇಲ್ಲಿ ಭೇಟಿ ನೀಡುವ ಭಕ್ತಾದಿಗಳು ಹೇಳುತ್ತಾರೆ. ಭಕ್ತಾದಿಗಳು ದೇವಳದ ಗೇಟ್ ಮುಖಾಂತರ ಪ್ರವೇಶಿಸಿ ದೇವರಿಗೆ ನಮಿಸಿ ನಂತರ ದರ್ಗಾಗೆ ಆಗಮಿಸಿ ಅಲ್ಲಿ ಪ್ರಾರ್ಥನೆ ಸಲ್ಲಿಸುತ್ತಾರೆ. ಒಂದೇ ಪೂಜಾ ಥಾಲಿಯನ್ನು ಎರಡೂ ಕಡೆ ಭಕ್ತರು ಉಪಯೋಗಿಸುತ್ತಾರೆ.
ಈ ಎರಡೂ ಧಾರ್ಮಿಕ ಸ್ಥಳಗಳನ್ನು ನೋಡಿಕೊಳ್ಳುತ್ತಿರುವವರು 51 ವರ್ಷದ ಮಹಂತ್ ನವಾಲ್ ಬಾಬಾ. ಎರಡೂ ಧಾರ್ಮಿಕ ಸ್ಥಳಗಳೂ ಸಮಾನ ಮಹತ್ವ ಹೊಂದಿವೆ ಎಂದು ಅವರು ಹೇಳುತ್ತಾರೆ.