ಪಕ್ಷವಿರೋಧಿ ಚಟುವಟಿಕೆ ನಡೆಸಿ ಕಾಂಗ್ರೆಸ್ ಗೆ ಸಹಕರಿಸುತ್ತಿರುವ ಈಶ್ವರಪ್ಪ ಆ್ಯಂಡ್ ಟೀಂ: ಬಿಎಸ್ ವೈ ಗುಡುಗು

ಬೆಂಗಳೂರು, ಎ.27: ಪಕ್ಷದೊಳಗಿನ ಅಸಮಾಧಾನ ಬಗೆಹರಿಸುವ ನಿಟ್ಟಿನಲ್ಲಿ ಸಾಕಷ್ಟು ಬದಲಾವಣೆ ಮಾಡಿದ್ದೇವೆ. ಈಶ್ವರಪ್ಪ ಹಾಗೂ ಅವರ ತಂಡ ಕಾಂಗ್ರೆಸ್ ಗೆ ಸಹಕರಿಸುತ್ತಿದ್ದು, ರಾಜ್ಯದ ಜನತೆ ಎಲ್ಲವನ್ನೂ ಗಮನಿಸುತ್ತಿದ್ದಾರೆ. ಈಶ್ವರಪ್ಪ ಪಕ್ಷವಿರೋಧಿ ಕೆಲಸ ಮಾಡುತ್ತಿದ್ದಾರೆ ಎಂದು ಬಿ.ಎಸ್.ಯಡಿಯೂರಪ್ಪ ಈಶ್ವರಪ್ಪರ ವಿರುದ್ಧ ಕಿಡಿಕಾರಿದ್ದಾರೆ.
ಡಾಲರ್ಸ್ ಕಾಲನಿ ನಿವಾಸದಲ್ಲಿ ಈಶ್ವರಪ್ಪ ಮತ್ತು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸಂತೋಷ್ ವಿರುದ್ಧ ವಾಗ್ದಾಳಿ ನಡೆಸಿದ ಯಡಿಯೂರಪ್ಪ, ಈ ವಿಷಯಗಳನ್ನು ಈಶ್ವರಪ್ಪ ನಾಲ್ಕುಗೋಡೆಗಳ ನಡುವೆ ಚರ್ಚಿಸಬಹುದಿತ್ತು. ಇವತ್ತಿನ ಸಭೆಯಲ್ಲಿ ಮಾಜಿ ಶಾಸಕರು, ಮಾಜಿ ಎಂಎಲ್ಸಿಗಳು ಭಾಗವಹಿಸಿದ್ದಾರೆ. ಸಂತೋಷ್ ಶಿಷ್ಯರೇ ಅಲ್ಲಿದ್ದಾರೆ. ಅವರ ಪ್ರೇರಣೆಯಿಂದಲೇ ಇವೆಲ್ಲಾ ನಡೆಯುತ್ತಿದ್ದು, ಎಲ್ಲಾ ವಿಚಾರಗಳನ್ನು ರಾಷ್ಟ್ರೀಯ ಅಧ್ಯಕ್ಷರ ಗಮನಕ್ಕೆ ತರುತ್ತೇನೆ ಎಂದರು.
ನಂಜನಗೂಡು ಗುಂಡ್ಲುಪೇಟೆ ಚುನಾವಣೆ ಸೋಲಿಗೆ ಪಕ್ಷ ಸಂಘಟನೆ ಜವಾಬ್ದಾರಿ ಎಂದು ಈಶ್ವರಪ್ಪ ಹೇಳಿದ್ದಾರೆ. ಆದರೆ ಈಶ್ವರಪ್ಪ ನಿಜವಾದ ಪಕ್ಷವಿರೋಧಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ನಮ್ಮ ಕೆಲವು ನಾಯಕರ ಬೆಂಬಲವಿದೆ. ಯಾವುದೇ ಕಾರಣಕ್ಕೂ ಬ್ರಿಗೇಡ್ ಚಟುವಟಿಕೆ ಮಾಡಬಾರದೆಂದು ಈ ಹಿಂದೆಯೇ ಹೈಕಮಾಂಡ್ ಹೇಳಿತ್ತು. ಅಸಮಾಧಾನದ ಬಗ್ಗೆ ಚರ್ಚೆ ನಡೆಸಲು ಸಮಯ ಬೇಕಾಗುತ್ತದೆ. ಆದರೆ ಪಕ್ಷದ ನಾಯಕರ ಜೊತೆ ಸಮಾಲೋಚನೆ ನಡೆಸದೆ ಪ್ರತ್ಯೇಕ ಸಭೆ ಕರೆಯೋದು ಹೇಗೆ ಎಂದವರು ಪ್ರಶ್ನಿಸಿದರು.
"ನನ್ನ ಚಟುವಟಿಕೆ ನಾಳೆಯಿಂದ ಮುಂದುವರಿಯುತ್ತದೆ. ಈಶ್ವರಪ್ಪ ಆ್ಯಂಡ್ ಟೀಮ್ ಗೊಂದಲ ಉಂಟುಮಾಡಿದ್ದಾರೆ. ಈಶ್ವರಪ್ಪ ಯಾವುದೇ ಚಟುವಟಿಕೆಗಳನ್ನು ನಡೆಸಲಿ. ಎಲ್ಲವನ್ನೂ ರಾಷ್ಟ್ರೀಯ ಅಧ್ಯಕ್ಷರು ಗಮನಿಸುತ್ತಾರೆ" ಎಂದು ಬಿಎಸ್ ವೈ ಹೇಳಿದ್ದಾರೆ.







