ಪರಿಶಿಷ್ಟ ಜಾತಿ-ಪಂಗಡದ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನ ಮಂಜೂರು ಮಾಡುವಂತೆ ಆಗ್ರಹಿಸಿ ಧರಣಿ

ದಾವಣಗೆರೆ, ಎ.27: ಪರಿಶಿಷ್ಟ ಜಾತಿ ಮತ್ತು ಪ. ಪಂಗಡದ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನವನ್ನು ಕೂಡಲೇ ಮಂಜೂರು ಮಾಡುವಂತೆ ಆಗ್ರಹಿಸಿ ಅಖಿಲ ಭಾರತ ವಿದ್ಯಾರ್ಥಿ ಫೆಡರೇಷನ್ ಆಶ್ರಯದಲ್ಲಿ ವಿದ್ಯಾರ್ಥಿಗಳು ಗುರುವಾರ ಧರಣಿ ನಡೆಸಿದರು.
ಇಲ್ಲಿನ ಎವಿಕೆ ಕಾಲೇಜಿನಿಂದ ಮೆರವಣಿಗೆ ಆರಂಭಿಸಿದ ವಿದ್ಯಾರ್ಥಿಗಳು ವಿವಿಧ ರಸ್ತೆಗಳ ಮೂಲಕ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಗೆ ತೆರಳಿ ಸರಕಾರಕ್ಕೆ ಮನವಿ ಸಲ್ಲಿಸಿದರು.
2016-17ನೆ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪ. ಪಂಗಡದ ಪದವಿ ಪೂರ್ವ ಮತ್ತು ಪದವಿ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನ ಇದುವರೆಗೂ ತಲುಪಿಲ್ಲ. ಅಷ್ಟೇ ಅಲ್ಲದೇ 3 ವರ್ಷಗಳ ಅವಧಿಯ ವಿದ್ಯಾರ್ಥಿ ವೇತನವೂ ಸಹ ದೊರೆತಿಲ್ಲ. ಇದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ವಿದ್ಯಾರ್ಥಿ ವೇತನ ನೀಡಲು ಕಾಲೇಜಿನಿಂದ ಬ್ಯಾಂಕಿಗೆ ಅಲೆದಾಡಿಸುತ್ತಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದೆಲ್ಲಡೆ ಪರಿಶಿಷ್ಟ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನ ನೀಡುವಲ್ಲಿ ಸಮಾಜ ಕಲ್ಯಾಣ ವಿಫಲವಾಗಿದೆ. ಅಲ್ಲದೇ ಕೆಲವು ಖಾಸಗಿ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳ ದಾಖಲಾತಿ ಶುಲ್ಕದಲ್ಲಿ ವಿನಾಯಿತಿ ಅರ್ಜಿ ಹಾಕಿರುವುದಿಲ್ಲ ಎನ್ನುವ ನೆಪವೊಡ್ಡಿ ಏಕಾಏಕಿ ವಿದ್ಯಾರ್ಥಿಗಳನ್ನು ಶುಲ್ಕ ಪಾವತಿಸುವಂತೆ ಒತ್ತಾಯವನ್ನು ಮಾಡುತ್ತಿವೆ. ಪರೀಕ್ಷೆ ಬರೆಯಲು ಅವಕಾಶ ಕೊಡುವುದಿಲ್ಲ ಎನ್ನುವ ಬೆದರಿಕೆ ಹಾಕುತ್ತಿವೆ. ಖಾಸಗಿ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಕಿರುಕುಳ ನೀಡುತ್ತಿರುವುದು ಸರಿಯಲ್ಲ. ಈ ಕೂಡಲೇ ಸರಕಾರ ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ರಮೇಶ್ ನಾಯ್ಕ, ಪ್ರಶಾಂತ್ ಮತ್ತಿ, ಚಂದ್ರನಾಯ್ಕಿ, ಶಾಂತರಾಜ್ ಜೈನ್, ಮೇಘಾ, ಜ್ಯೋತಿ, ಗೌತಮಿ. ದಿವ್ಯ, ರೂಪ ಸೇರಿದಂತೆ ಇತರರು ಇದ್ದರು.







