ನ್ಯಾಯಾಲಯದ ಆದೇಶವಿದ್ದರೂ ಕಾನೂನು ಬಾಹಿರವಾಗಿ ಕ್ರಷರ್: ಗ್ರಾಮಸ್ಥರ ಆಕ್ಷೇಪ
ಹೆಬ್ರಿ, ಎ.27: ಶಿವಪುರ ಯಳಗೋಳಿಯ ಕ್ರಷರ್ ತಾತ್ಕಾಲಿಕ ಸ್ಥಗಿತಕ್ಕೆ ನ್ಯಾಯಾಲಯದ ಆದೇಶವಿದ್ದರೂ ಸಾರ್ವಜನಿಕರ ವಿರೋಧದ ನಡುವೆಯೇ ಕ್ರಷರ್ ಕಾರ್ಯಾಚರಿಸುತ್ತಿದೆ. ಕಾರ್ಕಳ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದ್ದು ಕರ್ನಾಟಕ ಜಲಮಾಲಿನ್ಯ ನಿಯಂತ್ರಣ ಅಪೀಲು ಪ್ರಾಧಿಕಾರವು ತಮ್ಮ ಅಪೀಲು ಇತ್ಯರ್ಥವಾಗುವ ತನಕ ತಡೆಯಾಜ್ಞೆ ನೀಡಿದ್ದು ವಿಚಾರಣೆ ಬಾಕಿ ಇದೆ. ಈ ನಡುವೆ ಕ್ರಶರ್ ಮಾಲಕರು ಯಾವುದನ್ನೂ ಲೆಕ್ಕಿಸದೆ ಸರ್ಕಾರಿ ಜಾಗದಲ್ಲಿ ಪ್ರಾಧಿಕಾರ ನೀಡಿದ ಆದೇಶ ಧಿಕ್ಕರಿಸಿ ಕ್ರಶರ್ ನಡೆಸುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗ್ರಾಮಸ್ಥರಾದ ಗುರುಪ್ರಸಾದ್ ಆಚಾರ್ಯ, ವಾದಿರಾಜ ಆಚಾರ್ಯ, ಶೇಖರ ಪೂಜಾರಿ, ರವಿ ಶೆಟ್ಟಿ, ಪ್ರಕಾಶ್ ಜಿಲ್ಲಾಧಿಕಾರಿಗೆ, ಸಂಬಂಧಪಟ್ಟ ಇಲಾಖೆಗಳ ಗಮನಕ್ಕೆ ತಂದರೂ ಇದುವರೆಗೆ ಏನೂ ಪ್ರಯೋಜನವಾಗಿಲ್ಲ ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಕ್ರಷರ್ ನಿಂದಾಗಿ ಪರಿಸರ ಮಾಲಿನ್ಯ, ನೀರು ಕಲುಷಿತಗೊಂಡಿದ್ದು, ರಸ್ತೆ ಸಂಪೂರ್ಣ ಹಾಳಾಗಿದೆ. ಆಸುಪಾಸಿನ ಮನೆಗಳ ಗೋಡೆ ಬಿರುಕು ಬಿಟ್ಟಿದೆ. ಇನ್ನಾದರೂ ಕ್ರಷರ್ ಸ್ಥಗಿತಗೊಳಿಸಿ ತಮ್ಮ ಗ್ರಾಮವನ್ನು ಕ್ರಷರ್ ಮುಕ್ತಗೊಳಿಸಬೇಕು. ಮುಂದಿನ ದಿನಗಳಲ್ಲಿ ತಮಗೆ ನ್ಯಾಯ ದೊರಕದಿದ್ದಲ್ಲಿ ಉಡುಪಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಮಾಡಲಾಗುವುದು ಎಂದು ತಿಳಿಸಿದರು.
ತಡೆಯಾಜ್ಞೆ ಕುರಿತ ಯಾವುದೇ ನೋಟಿಸ್ ಬಂದಿಲ್ಲ: ಸರ್ಕಾರದ ಆದೇಶದ ಪಾಲನೆ ಮಾಡಿಯೇ ನಾವು ಕ್ರಷರ್ ನಡೆಸುತ್ತಿದ್ದು, ಸರ್ಕಾರಕ್ಕೆ ಈವರೆಗೆ ಶೇ.100 ತೆರಿಗೆ ಪಾವತಿಸಲಾಗಿದೆ. ಇನ್ನೂ 2 ವರ್ಷ ಕ್ರಶರ್ ನಡೆಸಲು ಪರವಾನಿಗೆ ಇದ್ದು, ಸ್ಥಳೀಯ ಪಂಚಾಯತ್ ನಿಂದ ಪ್ರತಿವರ್ಷವೂ ಪರವಾನಿಗೆ ನವೀಕರಣ ಮಾಡುತ್ತಿರುವುದಾಗಿ ಕ್ರಷರ್ ಮಾಲಕ ಪ್ರಸನ್ನ ಸೂಡ ಕಲ್ಮುಂಡ ತಿಳಿಸಿದ್ದಾರೆ.







