‘ಶರಪೋವಾ ವಂಚಕಿ, ಆಕೆಯನ್ನು ಬ್ಯಾನ್ ಮಾಡಬೇಕು’ : ಕೆನಡಾ ಆಟಗಾರ್ತಿ ಬೌಚರ್ಡ್ ಆಗ್ರಹ

ಪ್ಯಾರಿಸ್, ಎ.27: ಉದ್ದೀಪನಾ ಮದ್ದು ಸೇವನೆಗೆ ಸಂಬಂಧಿಸಿ ನಿಷೇಧ ಎದುರಿಸಿ ಇದೀಗ ಸಕ್ರಿಯ ಟೆನಿಸ್‌ಗೆ ವಾಪಸಾಗಿರುವ ರಶ್ಯದ ಟೆನಿಸ್ ತಾರೆ ಮರಿಯಾ ಶರಪೋವಾ ವಿರುದ್ಧ ಕೆನಡಾದ ಆಟಗಾರ್ತಿ ಎವ್‌ಜಿನಿ ಬೌಚರ್ಡ್ ವಾಗ್ದಾಳಿ ನಡೆಸಿದ್ದಾರೆ.
‘‘ಶರಪೋವಾ ಓರ್ವ ವಂಚಕಿ, ಆಕೆಯನ್ನು ಟೆನಿಸ್‌ನಿಂದ ಸಂಪೂರ್ಣ ನಿಷೇಧ ಹೇರಬೇಕು. 15 ತಿಂಗಳ ಕಾಲ ನಿಷೇಧ ಎದುರಿಸಿರುವ ಶರಪೋವಾಗೆ ಮತ್ತೊಮ್ಮೆ ಟೆನಿಸ್ ಆಡಲು ಅವಕಾಶ ನೀಡಿರುವ ವಿಶ್ವ ಮಹಿಳಾ ಟೆನಿಸ್ ಸಂಸ್ಥೆ ವಿಶ್ವಕ್ಕೆ ತಪ್ಪು ಸಂದೇಶವನ್ನು ನೀಡಿದೆ’’ ಎಂದು ಬೌಚರ್ಡ್ ಹೇಳಿದ್ದಾರೆ.
ಫೋರ್ಬ್ಸ್ ನಿಯತಕಾಲಿಕೆಯ ಪ್ರಕಾರ ಕಳೆದ ಒಂದು ದಶಕದಿಂದ ವಿಶ್ವದ ಅತ್ಯಂತ ಶ್ರೀಮಂತ ಅಥ್ಲೀಟ್ ಆಗಿರುವ ಶರಪೋವಾ ಬುಧವಾರವಷ್ಟೇ ಸಕ್ರಿಯ ಟೆನಿಸ್‌ಗೆ ವಾಪಸಾಗಿದ್ದರು.
‘‘ನನ್ನ ಪ್ರಕಾರ ಶರಪೋವಾಗೆ ಮತ್ತೆ ಅವಕಾಶ ನೀಡಿದ್ದು ಸರಿಯಲ್ಲ. ಆಕೆ ಮೋಸಗಾರ್ತಿ, ಮೋಸಗಾರರಿಗೆ ಯಾವುದೇ ಕ್ರೀಡೆಯಲ್ಲಿ ಮತ್ತೊಮ್ಮೆ ಆಡಲು ಅವಕಾಶ ನೀಡುವುದನ್ನು ನಾನು ಒಪ್ಪುವುದಿಲ್ಲ. ಪ್ರಾಮಾಣಿಕತೆಯಿಂದ ಆಡುತ್ತಿರುವ ಇತರ ಎಲ್ಲ ಆಟಗಾರರಿಗೆ ಇದರಿಂದ ಅನ್ಯಾಯವಾಗುತ್ತ್ತದೆ. ಡಬ್ಲುಟಿಎ ಯುವ ಆಟಗಾರರಿಗೆ ಈ ಮೂಲಕ ತಪ್ಪು ಸಂದೇಶವನ್ನು ನೀಡುತ್ತಿದೆ’’ ಎಂದು ಕೆನಡಾದ ಆಟಗಾರ್ತಿ ಬೌಚರ್ಡ್ ಹೇಳಿದ್ದಾರೆ.







