ಇಮಾನ್ ಸದ್ಯವೇ ಮುಂಬೈಯಿಂದ ಅಬುಧಾಬಿ ಆಸ್ಪತ್ರೆಗೆ ?
‘ತೂಕ’ ಕಳೆದುಕೊಂಡಿದ್ದಾಳೆನ್ನಲಾದ ಈಜಿಪ್ಟ್ ನ ಅತ್ಯಂತ ಭಾರದ ಮಹಿಳೆಯ ಸುತ್ತ ಹರಡಿದ ವಿವಾದ

ಮುಂಬೈ,ಎ.27 : ವಿಶ್ವದ ಅತ್ಯಂತ ಭಾರದ ಮಹಿಳೆಯಾಗಿದ್ದ ಈಜಿಪ್ಟ್ ನ 36 ವರ್ಷದ ಇಮಾನ್ ಅಹ್ಮದ್ ಮುಂಬೈಯ ಸೈಫೀ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ತನ್ನ ಸಾಕಷ್ಟು ದೇಹ ಭಾರವನ್ನು ಇಳಿಸಿದ್ದಾಳೆಂಬುದು ಸುದ್ದಿಯಾಗುತ್ತಿದ್ದಂತೆಯೇ ಇದೀಗ ಆಕೆಯನ್ನು ಈ ಆಸ್ಪತ್ರೆಯಿಂದ ಅಬು ಧಾಬಿಯ ಆಸ್ಪತ್ರೆಯೊಂದಕ್ಕೆ ವರ್ಗಾಯಿಸಲಾಗುವುದೆಂಬ ಸುದ್ದಿ ಹಬ್ಬಿದೆ.
ಆಸ್ಪತ್ರೆಗೆ ದಾಖಲಾಗುವಾಗ 500 ಕೆ.ಜಿಯಷ್ಟಿದ್ದ ಇಮಾನ್ ಳ ತೂಕ 240ರಿಂದ 260 ಕೆಜಿಯಷ್ಟು ಕಡಿಮೆಯಾಗಿದೆ ಹಾಗೂ ಆಕೆಯ ಸ್ಥಿತಿ ಈಗ ಶಸ್ತ್ರಕ್ರಿಯೆಯ ನಂತರ ಹಿಂದಿಗಿಂತ ಉತ್ತಮವಾಗಿದೆ ಎಂದು ಸೈಫೀ ಆಸ್ಪತ್ರೆಯ ವೈದ್ಯರು ಹೇಳಿದ ಎರಡೇ ದಿನಗಳಲ್ಲಿ ಇಮಾನ್ ಳ ಸಹೋದರಿ ವೀಡಿಯೋವೊಂದರಲ್ಲಿ ಆಸ್ಪತ್ರೆ ಹೇಳುತ್ತಿರುವುದು ಎಲ್ಲಾ ಸುಳ್ಳು ಹಾಗೂ ಆಕೆಯ ಪರಿಸ್ಥಿತಿ ಸುಧಾರಿಸಿಲ್ಲ ಎಂದು ಹೇಳಿದ್ದಳು. ಸೈಫೀ ಆಸ್ಪತ್ರೆಯ ವೈದ್ಯರು ಮಾತ್ರ ಈ ಆರೋಪವನ್ನು ನಿರಾಕರಿಸಿದ್ದರು.
ಇದೀಗ ಇನ್ನೊಂದು ಬೆಳವಣಿಗೆಯಲ್ಲಿ ಕೇರಳ ಮೂಲದ ಕೋಟ್ಯಾಧಿಪತಿ ಶಂಶೀರ್ ವಯಳ್ಳಿ ಅವರ ಒಡೆತನದ ವಿಪಿಎಸ್ ಸಮೂಹದ ಆಡಳಿತದ ಬುರ್ಜೀಲ್ ಆಸ್ಪತ್ರೆಯ ನಾಲ್ಕು ಮಂದಿ ವೈದ್ಯರ ತಂಡ ಬುಧವಾರದಂದು ಮುಂಬೈಯ ಸೈಫೀ ಆಸ್ಪತ್ರೆಗೆ ಭೇಟಿ ನೀಡಿ ಇಮಾನ್ ಸಹೋದರಿಯ ಮನವಿಯಂತೆ ಆಕೆಯ ವೈದ್ಯಕೀಯ ದಾಖಲೆಗಳನ್ನು ಪರಿಶೀಲಿಸಿದೆ. ತಂಡ ಇಮಾನ್ ಳನ್ನು ಭಾರತಕ್ಕೆ ಕರೆತರಲು ಶ್ರಮಿಸಿದ ಹಾಗೂ ಆಕೆಯ ಶಸ್ತ್ರಚಿಕಿತ್ಸೆ ನಡೆಸಿದ ಡಾ ಮುಫ್ಫಝಲ್ ಲಕ್ಡವಾಲ ಅವರನ್ನೂ ಕಂಡು ಮಾತನಾಡಿದೆ ಎಂದು ತಿಳಿದು ಬಂದಿದೆ.
ತರುವಾಯ ಇಮಾನ್ ಳ ಚಿಕಿತ್ಸೆಗೆ ಈ ತನಕ ಸುಮಾರು ರೂ 2 ಕೋಟಿ ವೆಚ್ಚ ಮಾಡಿರುವ ಸೈಫೀ ಆಸ್ಪತ್ರೆ ಇಮಾನ್ ಳ ದೇಹಸ್ಥಿತಿಯನ್ನು ಪರಾಮರ್ಶಿಸಲು ಹಲವಾರು ಮುಂಬೈ ಮೂಲದ ತಜ್ಞರನ್ನು ಸಂಪರ್ಕಿಸುತ್ತಿದೆ. ‘‘ಇಮಾನ್ ಈಗ ಹಿಂದಿಗಿಂತ ಉತ್ತಮ ಸ್ಥಿತಿಯಲ್ಲಿದ್ದಾರೆಂದು ತಿಳಿದಿದೆ. ಆದರೂ ಆಕೆಯ ಈಗಿನ ಸ್ಥಿತಿಯ ಬಗ್ಗೆ ಸ್ವತಂತ್ರವಾಗಿ ಪರಾಮರ್ಶಿಸಲು ನಾವು ತಜ್ಞರನ್ನು ಸಂಪರ್ಕಿಸುತ್ತಿದ್ದೇವೆ’’ ಎಂದು ಇಮಾನ್ ಚಿಕತ್ಸೆಯಲ್ಲಿ ನಿರತವಾಗಿರುವ 13 ಮಂದಿ ವೈದ್ಯರ ತಂಡದಲ್ಲರುವ ಡಾ ಅಪರ್ಣಾ ಗವಿಲ್ ಭಾಸ್ಕರ ಹೇಳಿದ್ದಾರೆ.







