ಉತ್ತರಾಖಂಡ ಚುನಾವಣೆಯಲ್ಲಿ ಬಳಕೆಯಾಗಿದ್ದ ಇವಿಎಂ ಯಂತ್ರಗಳ ವಶಕ್ಕೆ ಹೈಕೋರ್ಟ್ ಆದೇಶ

ನೈನಿತಾಲ್,ಎ.27: ಇತ್ತೀಚಿನ ಉತ್ತರಾಖಂಡ ವಿಧಾನಸಭಾ ಚುನಾವಣೆಯ ಸಂದರ್ಭ ವಿಕಾಸ್ ನಗರ ಕ್ಷೇತ್ರದಲ್ಲಿ ಮತದಾನಕ್ಕೆ ಬಳಕೆಯಾಗಿದ್ದ ಇವಿಎಂ ಅನ್ನು ನ್ಯಾಯಾಲಯದ ವಶಕ್ಕೆ ಪಡೆಯುವಂತೆ ಉತ್ತರಾಖಂಡ ಉಚ್ಚ ನ್ಯಾಯಾಲಯವು ಆದೇಶಿಸಿದೆ.
ರಾಜ್ಯ ರಾಜಧಾನಿ ಡೆಹ್ರಾಡೂನ್‌ಗೆ ಸಮೀಪದ ಈ ಕ್ಷೇತ್ರದಲ್ಲಿ ಪರಾಭವಗೊಂಡಿರುವ ಹಿರಿಯ ಕಾಂಗ್ರೆಸ್ ನಾಯಕ ನವ ಪ್ರಭಾತ್ ಅವರು ಬಿಜೆಪಿಯ ಮುನ್ನಾ ಸಿಂಗ್ ಚೌಹಾಣ್ ಅವರ ಆಯ್ಕೆಯನ್ನು ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದಾರೆ.
ಉತ್ತರಾಖಂಡ ಮತ್ತು ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿಯ ಪ್ರಚಂಡ ಗೆಲುವಿಗೆ ಇವಿಎಂಗಳಲ್ಲಿ ಹಸ್ತಕ್ಷೇಪ ಕಾರಣವಾಗಿದೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ. ಇದನ್ನು ನಿರಾಕರಿಸಿರುವ ಚುನಾವಣಾ ಆಯೋಗವು,ಇವಿಎಂಗಳನ್ನು ತಿರುಚುವುದು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ. ಗುರುವಾರ ಚುನಾವಣಾ ಆಯೋಗ, ರಾಜ್ಯ ಮುಖ್ಯ ಚುನಾವಣಾಧಿಕಾರಿ ಮತ್ತು ಚೌಹಾಣ್ ಅವರಿಗೆ ನೋಟಿಸುಗಳನ್ನು ಹೊರಡಿಸಿರುವ ನ್ಯಾಯಾಲಯವು ಆರು ವಾರಗಳಲ್ಲಿ ಉತ್ತರಿಸುವಂತೆ ನಿರ್ದೇಶ ನೀಡಿದೆ. ಮುಂದಿನ ಆದೇಶದವರೆಗೆ ವಿಕಾಸ ನಗರದಲ್ಲಿ ಬಳಕೆಯಾಗಿದ್ದ ಮತಯಂತ್ರಗಳನ್ನು ಬೇರೆಲ್ಲಿಯೂ ಬಳಸದಂತೆ ಅದು ಚುನಾವಣಾ ಆಯೋಗಕ್ಕೆ ತಾಕೀತು ಮಾಡಿದೆ.
ಉತ್ತರಾಖಂಡದ 70 ವಿಧಾನಸಭಾ ಕ್ಷೇತ್ರಗಳಲ್ಲಿ ಸುಮಾರು 11,000 ಮತಯಂತ್ರಗಳನ್ನು ಬಳಸಲಾಗಿದ್ದು.ಈ ಪೈಕಿ 139 ಮತಯಂತ್ರಗಳನ್ನು ವಿಕಾಸ ನಗರದ ಮತಗಟ್ಟೆಗಳಲ್ಲಿ ಸ್ಥಾಪಿಸಲಾಗಿತ್ತು.