ಗಂಗುಲಿ ಐಪಿಎಲ್ ಫ್ಯಾಂಟಸಿ ತಂಡದಲ್ಲಿ ಧೋನಿಗಿಲ್ಲ ಸ್ಥಾನ!

ಕೋಲ್ಕತಾ, ಎ.27: ಭಾರತದ ಮಾಜಿ ನಾಯಕ ಸೌರವ್ ಗಂಗುಲಿ ತನ್ನ ನಂಬಿಕೆಗೆ ಬಲವಾಗಿ ಅಂಟಿಕೊಂಡವರು. ಕೋಲ್ಕತಾ ಪ್ರಿನ್ಸ್ ಖ್ಯಾತಿಯ ಗಂಗುಲಿ ವೃತ್ತಿಜೀವನದಲ್ಲಿ ತನ್ನನ್ನು ಹಣಿಯಲು ಯತ್ನಿಸಿದವರನ್ನು ಸುಲಭವಾಗಿ ಮರೆಯುವ ವ್ಯಕ್ತಿಯಲ್ಲ.
ಅವರ ಈ ವ್ಯಕ್ತಿತ್ವ ಭಾರತೀಯ ತಂಡ ಸಂಕಷ್ಟದಲ್ಲಿದ್ದಾಗ ತಂಡವನ್ನು ಮುನ್ನಡೆಸಲು ಪೂರಕವಾಯಿತ್ತಲ್ಲದೆ, ಅವರು ದೇಶದ ಓರ್ವ ಯಶಸ್ವಿ ನಾಯಕನಾಗಲು ಕಾರಣವಾಯಿತು. ನಿವೃತ್ತಿಯ ಬಳಿಕವೂ ಗಂಗುಲಿ ವ್ಯಕ್ತಿತ್ವದಲ್ಲಿ ಬದಲಾವಣೆಯಾಗಿಲ್ಲ. ಭಾರತದ ಕೋಚ್ ಆಯ್ಕೆಯ ವೇಳೆ ವಿವಾದಗಳು ಸುತ್ತುವರಿದಾಗ ತನ್ನ ನಿಲುವನ್ನು ಸ್ಪಷ್ಟಪಡಿಸಿದ್ದ ಗಂಗುಲಿ ಕೋಚ್ ಹುದ್ದೆಯ ಸ್ಪರ್ಧೆಯಲ್ಲಿದ್ದ ರವಿ ಶಾಸ್ತ್ರಿಯನ್ನು ಚೆನ್ನಾಗಿ ತರಾಟೆಗೆ ತೆಗೆದುಕೊಂಡಿದ್ದರು.
ಟ್ವೆಂಟಿ-20 ಬ್ಯಾಟ್ಸ್‌ಮನ್ ಆಗಿ ಧೋನಿಯ ಸಾಮರ್ಥ್ಯವನ್ನು ಪ್ರಶ್ನಿಸಿದ್ದ ಗಂಗುಲಿ ಸುದ್ದಿಯಾಗಿದ್ದರು. ಧೋನಿ ಉತ್ತಮ ಟ್ವೆಂಟಿ-20 ಆಟಗಾರನಲ್ಲ ಎಂದು ಧೋನಿಯ ಅಭಿಮಾನಿಗಳಿಂದ ಟೀಕೆಗೆ ಗುರಿಯಾಗಿದ್ದ ಗಂಗುಲಿ ಇದೀಗ ತಾನು ಆಯ್ಕೆ ಮಾಡಿರುವ ಐಪಿಎಲ್ ಫ್ಯಾಂಟಸಿ ಇಲೆವೆನ್ ತಂಡದಲ್ಲಿ ಧೋನಿಯನ್ನು ಕಡೆಗಣಿಸಿದ್ದಾರೆ. ಧೋನಿಯ ಬದಲಿಗೆ ದಿಲ್ಲಿಯ ವಿಕೆಟ್‌ಕೀಪಿಂಗ್-ಬ್ಯಾಟ್ಸ್‌ಮನ್ ರಿಷಬ್ ಪಂತ್‌ರನ್ನು ತಂಡಕ್ಕೆ ಆಯ್ಕೆ ಮಾಡಿದ್ದಾರೆ.
ಗಂಗುಲಿ ಇಲೆವೆನ್: ವಿರಾಟ್ ಕೊಹ್ಲಿ, ಗೌತಮ್ ಗಂಭೀರ್, ಸ್ಟೀವನ್ ಸ್ಮಿತ್,ಎಬಿಡಿವಿಲಿಯರ್ಸ್, ನಿತೀಶ್ ರಾಣಾ, ಮನೀಶ್ ಪಾಂಡೆ, ರಿಷಬ್ ಪಂತ್, ಸುನೀಲ್ ನರೇನ್, ಅಮಿತ್ ಮಿಶ್ರಾ, ಭುವನೇಶ್ವರ ಕುಮಾರ್, ಕ್ರಿಸ್ ಮೊರಿಸ್.







