ಬಿಜೆಪಿ ಭಿನ್ನಮತೀಯರ ಸಭೆಯಲ್ಲಿ ಭಾಗವಹಿಸಿದವರ ಮಾಹಿತಿ ಸಂಗ್ರಹ

ಶಿವಮೊಗ್ಗ, ಎ.27: ಕೆ.ಎಸ್.ಈಶ್ವರಪ್ಪ ನೇತೃತ್ವದಲ್ಲಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಗುರುವಾರ ಆಯೋಜಿಸಿದ್ದ ಸಭೆಗೆ ತೆರಳದಂತೆ ಪಕ್ಷದಿಂದ ಅಧಿಕೃತ ಸೂಚನೆ ರವಾನಿಸಿದ್ದರೂ, ಹಲವು ಬಿಜೆಪಿ ಮುಖಂಡರು ಸಭೆಯಲ್ಲಿ ಭಾಗವಹಿಸಿರುವುದು ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮತ್ತವರ ಬೆಂಬಲಿಗರ ಆಕ್ರೋಶಕ್ಕೆ ಕಾರಣವಾಗಿದೆ.
ಈ ಹಿನ್ನೆಲೆಯಲ್ಲಿ ಸಭೆಯಲ್ಲಿ ಭಾಗವಹಿಸಿದ ಮುಖಂಡರ ಮಾಹಿತಿ ಸಂಗ್ರಹಿಸುವಂತೆ ಬಿಜೆಪಿ ಜಿಲ್ಲಾ ಸಮಿತಿಗಳಿಗೆ ರಾಜ್ಯ ಸಮಿತಿ ಸೂಚಿಸಿದ್ದು, ಅದರಂತೆ ಜಿಲ್ಲಾ ಸಮಿತಿಗಳು ಮುಖಂಡರ ಮಾಹಿತಿ ಸಂಗ್ರಹಿಸುವ ಕಾರ್ಯವನ್ನು ಆರಂಭಿಸಿವೆ ಎಂದು ಬಿಜೆಪಿಯ ಉನ್ನತ ಮೂಲಗಳು ಮಾಹಿತಿ ನೀಡಿವೆ.
"ಪಕ್ಷದ ಸೂಚನೆಯ ಹೊರತಾಗಿಯೂ ಕೆಲ ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದಾರೆ. ಇಂತಹ ಮುಖಂಡರ ವಿರುದ್ಧ ಯಾವ ರೀತಿಯ ಕ್ರಮ ಜರಗಿಸಬೇಕು ಎಂಬುದನ್ನು ಪಕ್ಷದ ವರಿಷ್ಠರು ನಿರ್ಧರಿಸುತ್ತಾರೆ’ ಎಂದು ರಾಜ್ಯ ಬಿಜೆಪಿ ಮುಖಂಡರೊಬ್ಬರು ಹೇಳಿದ್ದಾರೆ.
ಪಕ್ಷದ ಆದೇಶಕ್ಕೆ ವಿರುದ್ಧವಾಗಿ ಪ್ರತ್ಯೇಕ ಸಭೆ ನಡೆಸಿದ್ದು ಸ್ಪಷ್ಟ ಶಿಸ್ತು ಉಲ್ಲಂಘನೆಯಾಗಿದ್ದು, ಈ ಸಭೆ ನಡೆಸಿದ ಮುಖಂಡರ ವಿರುದ್ಧ ಪಕ್ಷದ ರಾಷ್ಟ್ರೀಯ ವರಿಷ್ಠರಿಗೆ ದೂರು ನೀಡಲು ಬಿ.ಎಸ್.ವೈ. ಬಣದವರು ನಿರ್ಧರಿಸಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ.
ಮುಖಂಡರ ನಿರ್ಧಾರ: ಗುರುವಾರ ಶಿವಮೊಗ್ಗ ಬಿಜೆಪಿ ಜಿಲ್ಲಾಧ್ಯಕ್ಷ ಎಸ್.ರುದ್ರೇಗೌಡರವರು ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರೊಂದಿಗೆ ಮಾತನಾಡಿ, "ಬೆಂಗಳೂರಿನಲ್ಲಿ ಆಯೋಜಿಸಿರುವ ಸಭೆಗೆ ಜಿಲ್ಲೆಯಿಂದ ಯಾವ್ಯಾವ ಮುಖಂಡರು ತೆರಳಿದ್ದಾರೆಂಬ ಮಾಹಿತಿಯಿಲ್ಲ. ಸಭೆಯಲ್ಲಿ ಭಾಗವಹಿಸಿದವರ ಮೇಲೆ ಯಾವ ರೀತಿಯ ಕ್ರಮ ಜರಗಿಸಬೇಕು ಎಂಬುವುದನ್ನು ಪಕ್ಷದ ವರಿಷ್ಠರು ನಿರ್ಧರಿಸುತ್ತಾರೆ. ಈ ಬಗ್ಗೆ ಹೆಚ್ಚಿನ ಪ್ರತಿಕ್ರಿಯೆ ನೀಡಲು ಇಚ್ಚಿಸುವುದಿಲ್ಲ" ಎಂದು ಪ್ರತಿಕ್ರಿಯೆ ನೀಡಿದ್ದಾರೆ.







