ಪುತ್ತೂರು ಎಪಿಎಂಸಿ: ಬಿಜೆಪಿಗೆ 11, ಕಾಂಗ್ರೆಸ್ ಗೆ 2 ಸ್ಥಾನಗಳಲ್ಲಿ ಗೆಲುವು
4ನೆ ಬಾರಿಗೆ ಆಡಳಿತದ ಚುಕ್ಕಾಣಿ ಹಿಡಿದ ಬಿಜೆಪಿ

ಪುತ್ತೂರು, ಎ.27: ಪುತ್ತೂರು ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ)ಗೆ ನಡೆದ ಚುನಾವಣೆಯ ಮತ ಎಣಿಕೆ ಗುರುವಾರ ನಡೆದಿದ್ದು, ಒಟ್ಟು 13 ಕ್ಷೇತ್ರಗಳ ಪೈಕಿ ಬಿಜೆಪಿ ಬೆಂಬಲಿತರು 11 ಕ್ಷೇತ್ರಗಳಲ್ಲಿ ಹಾಗೂ ಕಾಂಗ್ರೆಸ್ ಬೆಂಬಲಿತರು 2 ಕ್ಷೇತ್ರಗಳಲ್ಲಿ ಜಯ ಸಾಧಿಸಿದ್ದಾರೆ. ಈ ಮೂಲಕ ಬಿಜೆಪಿ ಸತತ 4ನೇ ಬಾರಿಗೆ ಆಡಳಿತದ ಚುಕ್ಕಾಣಿ ಹಿಡಿದಿದೆ.
ಪುತ್ತೂರು ಎಪಿಎಂಸಿಯ 13 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಸಹಕಾರಿ ಕ್ಷೇತ್ರದಿಂದ ಬಿಜೆಪಿ ಬೆಂಬಲಿತ ಅಭ್ಯರ್ಥಿ ಕೃಷ್ಣಕುಮಾರ್ ರೈ ಗುತ್ತು ಅವರು ಅವಿರೋಧವಾಗಿ ಆಯ್ಕೆಗೊಂಡಿದ್ದರು. ಉಳಿದ 12 ಸ್ಥಾನಗಳಿಗೆ ಮಂಗಳವಾರ ಚುನಾವಣೆ ನಡೆದಿತ್ತು. ಚುನಾವಣೆ ನಡೆದ 12 ಕ್ಷೇತ್ರಗಳ ಪೈಕಿ 10 ಕ್ಷೇತ್ರಗಳಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಜಯ ಸಾಧಿಸಿದ್ದಾರೆ. ಕಾಂಗ್ರೆಸ್ ಬೆಂಬಲಿತರು ಕೇವಲ 2 ಕ್ಷೇತ್ರಗಳಲ್ಲಿ ಮಾತ್ರ ಗೆಲುವು ಸಾಧಿಸಲು ಶಕ್ತರಾಗಿದ್ದಾರೆ. 3 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಖಾತೆ ತೆರೆಯುವಲ್ಲಿ ವಿಫಲರಾಗಿದ್ದಾರೆ.
ಪುತ್ತೂರು ಕ್ಷೇತ್ರ: ಪುತ್ತೂರು ಕ್ಷೇತ್ರದಲ್ಲಿ ಬಿಜೆಪಿ ಬೆಂಬಲಿತರಾಗಿ ಸ್ಪರ್ಧಿಸಿದ್ದ ಮಾಜಿ ಎಂಪಿಎಂಸಿ ಅಧ್ಯಕ್ಷರೂ, ಜಿಲ್ಲಾ ಬಿಜೆಪಿ ಸಮಿತಿಯ ಕಾರ್ಯದರ್ಶಿಯೂ ಆಗಿರುವ ಬೂಡಿಯಾರ್ ರಾಧಾಕೃಷ್ಣ ರೈ ತನ್ನ ಪ್ರತಿಸ್ಪರ್ಧಿಯಾದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಎಂ.ಪ್ರಕಾಶ್ಚಂದ್ರ ಆಳ್ವ ಅವರನ್ನು 439 ಮತಗಳ ಅಂತರದಲ್ಲಿ ಸೋಲಿಸಿದ್ದಾರೆ. ರಾಧಾಕೃಷ್ಣ ರೈ ಅವರಿಗೆ 1,007 ಮತಗಳು ಹಾಗೂ ಪ್ರಕಾಶ್ಚಂದ್ರ ಆಳ್ವ ಅವರಿಗೆ 568 ಮತಗಳು ಲಭಿಸಿವೆ. ಈ ಕ್ಷೇತ್ರದಲ್ಲಿ 21 ಮತಗಳು ತಿರಸ್ಕೃತಗೊಂಡಿವೆ.
ಕುಂಬ್ರ ಕ್ಷೇತ್ರ: ಕುಂಬ್ರ ಕ್ಷೇತ್ರದಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಮಂಜುನಾಥ್ ಎನ್.ಎಸ್. ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ರವಿ ಅವರಿಗಿಂತ 609 ಅಧಿಕ ಮತಗಳನ್ನು ಪಡೆದು ಜಯ ಸಾಧಿಸಿದ್ದಾರೆ. ಜಿಲ್ಲಾ ಬಿಜೆಪಿ ಎಸ್ಟಿ ಮೋರ್ಚಾದ ಅಧ್ಯಕ್ಷರಾಗಿದ್ದ ಮಂಜುನಾಥ್ ಅವರಿಗೆ 1,383 ಮತಗಳು ಬಂದಿವೆ. ರವಿ ಅವರು 774 ಮತಗಳನ್ನು ಪಡೆದಿದ್ದಾರೆ. 29 ಮತಗಳು ತಿರಸ್ಕೃತಗೊಂಡಿವೆ.
ಕೋಡಿಂಬಾಡಿ ಕ್ಷೇತ್ರ: ಕೋಡಿಂಬಾಡಿ ಕ್ಷೇತ್ರದಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಕಾರ್ತಿಕ್ ರೈ ಬೆಳ್ಳಿಪ್ಪಾಡಿ ಅವರು ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿದ್ದ ಬಾಲಕೃಷ್ಣ ಜೋಯಿಸ ಅವರನ್ನು 92 ಮತಗಳ ಅಂತರದಿಂದ ಸೋಲಿಸಿದ್ದಾರೆ. ಕಾರ್ತಿಕ್ ರೈ ಅವರಿಗೆ 833 ಮತಗಳು ಲಭಿಸಿದ್ದರೆ ಬಾಲಕೃಷ್ಣ ಜೋಯಿಸ ಅವರಿಗೆ 741 ಮತಗಳು ಬಂದಿವೆ .ಇಲ್ಲಿ 18 ಮತಗಳು ತಿರಸ್ಕೃತಗೊಂಡಿವೆ.
ಉಪ್ಪಿನಂಗಡಿ ಕ್ಷೇತ್ರ: ಉಪ್ಪಿನಂಗಡಿ ಕ್ಷೇತ್ರದಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಕುಶಾಲಪ್ಪ ಗೌಡ ಅವರು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿದ್ದ ಪ್ರತಾಪಚಂದ್ರ ರೈ ಅವರನ್ನು 632 ಮತಗಳ ಅಂತರದಿಂದ ಮಣಿಸಿದ್ದಾರೆ. ಕುಶಾಲಪ್ಪ ಗೌಡ ಅವರಿಗೆ 1,258 ಮತಗಳು ಹಾಗೂ ಪ್ರತಾಪಚಂದ್ರ ರೈ ಅವರಿಗೆ 626 ಮತಗಳು ಲಭಿಸಿವೆ. 29 ಮತಗಳು ತಿರಸ್ಕೃತಗೊಂಡಿವೆ.
ನೆಲ್ಯಾಡಿ ಕ್ಷೇತ್ರ: ನೆಲ್ಯಾಡಿ ಕ್ಷೇತ್ರದಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಜಿಪಂ ಮಾಜಿ ಸದಸ್ಯ ಬಾಲಕೃಷ್ಣ ಬಾಣಜಾಲು ಅವರು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿದ್ದ ತಾಪಂ ಸದಸ್ಯೆ ಉಷಾ ಅಂಚನ್ ಅವರನ್ನು 226 ಮತಗಳ ಅಂತರದಲ್ಲಿ ಸೋಲಿಸಿದ್ದಾರೆ. ಬಾಲಕೃಷ್ಣ ಬಾಣಜಾಲು ಅವರಿಗೆ 1,203 ಮತಗಳು ಹಾಗೂ ಉಷಾ ಅಂಚನ್ ಅವರಿಗೆ 226 ಮತಗಳು ಲಭಿಸಿವೆ. 28 ಮತಗಳು ತಿರಸ್ಕೃತಗೊಂಡಿವೆ.
ಮರ್ಧಾಳ ಕ್ಷೇತ್ರ: ತ್ರಿಕೋನ ಸ್ಪರ್ಧೆ ಇದ್ದ ಮರ್ಧಾಳ ಕ್ಷೇತ್ರದಲ್ಲಿ ಬಿಜೆಪಿಯ ವೀರಪ್ಪ ಗೌಡ ಅವರು ತನ್ನ ಸಮೀಪದ ಪ್ರತಿಸ್ಪರ್ಧಿಯಾದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ರಾಮಕೃಷ್ಣರನ್ನು 173 ಮತಗಳ ಅಂತರದಿಂದ ಸೋಲಿಸಿದ್ದಾರೆ. ವೀರಪ್ಪ ಗೌಡ ಅವರು 1,151, ರಾಮಕೃಷ್ಣ ಅವರು 978 ಹಾಗೂ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಚಂದ್ರಶೇಖರ ಗೌಡ ಅವರು 187 ಮತಗಳನ್ನು ಪಡೆದಿದ್ದಾರೆ.
ಕಡಬ ಕ್ಷೇತ್ರ: ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿದ್ದ ತಾಪಂ ಮಾಜಿ ಅಧ್ಯಕ್ಷೆ ಪುಲಸ್ತ್ಯಾ ರೈ ಅವರು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿದ್ದ ನೀಲಾವತಿ ಅವರನ್ನು 348 ಮತಗಳ ಅಂತರದಿಂದ ಸೋಲಿಸಿದ್ದಾರೆ. ಪುಲಸ್ತ್ಯಾ ರೈ ಅವರಿಗೆ 1,292 ಮತಗಳು ಹಾಗೂ ನೀಲಾವತಿ ಅವರಿಗೆ 944 ಮತಗಳು ಲಭಿಸಿದೆ. 18 ಮತಗಳು ತಿರಸ್ಕೃತಗೊಂಡಿದೆ.
ಆಲಂಕಾರು ಕ್ಷೇತ್ರ: ಆಲಂಕಾರು ಕ್ಷೇತ್ರದಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಕೊರಗು ಅವರು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿದ್ದ ಅಂಗಾರ ಅವರನ್ನು 738 ಮತಗಳ ಅಂತರದಿಂದ ಮಣಿಸಿ ಜಯ ದಾಖಲಿಸಿದ್ದಾರೆ. ಕೊರಗು ಅವರಿಗೆ 1,131 ಮತಗಳು ಹಾಗೂ ಕೊರಗು ಅವರಿಗೆ ಕೇವಲ 398 ಮತಗಳು ಲಭಿಸಿವೆ. 15 ಮತಗಳು ತಿರಸ್ಕೃತಗೊಂಡಿವೆ.
ನರಿಮೊಗ್ರು ಕ್ಷೇತ್ರ: ನರಿಮೊಗ್ರು ಕ್ಷೇತ್ರದಲ್ಲಿ ಜಿಪಂ ಮಾಜಿ ಸದಸ್ಯೆಯಾಗಿರುವ ಬಿಜೆಪಿ ಬೆಂಬಲಿತ ಅಭ್ಯರ್ಥಿ ತ್ರಿವೇಣಿ ಕರುಣಾಕರ್ ಪೆರ್ವೋಡಿ ಅವರು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿದ್ದ ಪುತ್ತೂರು ಬ್ಲಾಕ್ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ವಿಶಾಲಾಕ್ಷಿ ಬನ್ನೂರು ಅವರನ್ನು 276 ಮತಗಳ ಅಂತರದಲ್ಲಿ ಸೋಲಿಸಿದ್ದಾರೆ. ತ್ರಿವೇಣಿ ಅವರಿಗೆ 1,505 ಮತಗಳು ಲಭಿಸಿದೆ. ವಿಶಾಲಾಕ್ಷಿ ಅವರು 1,229 ಮತಗಳನ್ನು ಪಡೆದಿದ್ದಾರೆ. 33 ಮತಗಳು ತಿರಸ್ಕೃತಗೊಂಡಿದೆ.
ವರ್ತಕ ಕ್ಷೇತ್ರ ವರ್ತಕರ ಕ್ಷೇತ್ರದಲ್ಲಿ ಕಾಂಗ್ರೆಸ್ ಬೆಂಬಲಿತರಾಗಿ ಸ್ಪರ್ಧಿಸಿದ್ದ ವಿ.ಎಚ್.ಅಬ್ದುಲ್ ಶಕೂರ್ ಹಾಜಿ ಅವರು ಮರು ಆಯ್ಕೆಗೊಂಡಿದ್ದಾರೆ. ಅಬ್ದುಲ್ ಶಕೂರ್ ಹಾಜಿ ಅವರು 181 ಮತಗಳನ್ನು ಪಡೆಯುವ ಮೂಲಕ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿದ್ದ ಕೆ.ಎಂ.ಹನೀಫ್ ಅವರನ್ನು 121 ಮತಗಳ ಅಂತರದಿಂದ ಪರಾವಗೊಳಿಸಿದ್ದಾರೆ. ಕೆ.ಎಂ.ಹನೀಫ್ ಅವರಿಗೆ 60 ಮತಗಳು ಲಭಿಸಿವೆ.
ಸವಣೂರು ಕ್ಷೇತ್ರದಲ್ಲಿ ಅಧಿಕ ಅಂತರದ ಗೆಲುವು: ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದ ಸವಣೂರು ಕ್ಷೇತ್ರದಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ತಾ ಪಂ ಮಾಜಿ ಉಪಾಧ್ಯಕ್ಷ ದಿನೇಶ್ ಮೆದು ಅವರು ಅತ್ಯಂತ ಹೆಚ್ಚು ಅಂತರದ ಜಯ ದಾಖಲಿಸಿದ್ದಾರೆ. 2,032 ಮತಗಳನ್ನು ಪಡೆದ ದಿನೇಶ್ ಮೆದು ಅವರು ಕಾಂಗ್ರೆಸ್ ಬೆಂಬಲಿತ ಅ್ಯರ್ಥಿಯಾಗಿದ್ದ ವೆಂಕಟ್ರಮಣ ಗೌಡ ಅವರನ್ನು 1,481 ಮತಗಳ ಅಂತರದಲ್ಲಿ ಸೋಲಿಸಿದ್ದಾರೆ. ವೆಂಕಟ್ರಮಣ ಗೌಡ ಅವರಿಗೆ 551 ಮತಗಳು ಹಾಗೂ ಜೆಡಿಎಸ್ ಬೆಂಬಲಿತ ಅಭ್ಯರ್ಥಿಯಾಗಿದ್ದ ಲೋಕನಾಥ ಪಕ್ಕಳ ಅವರಿಗೆ 116 ಮತಗಳು ಲಭಿಸಿದೆ.
ನೆಟ್ಟಣಿಗೆ ಮುಡ್ನೂರು ಕ್ಷೇತ್ರದಲ್ಲಿ ಬರೀ ಮೂರು ಮತಗಳ ಗೆಲುವು
ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದ ನೆಟ್ಟಣಿಗೆ ಮುಡ್ನೂರು ಕ್ಷೇತ್ರದಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ತೀರ್ಥಾನಂದ ದುಗ್ಗಳ ಅವರು ಕೇವಲ 3 ಮತಗಳ ಅಂತರದ ಅದೃಷ್ಟದ ಗೆಲುವು ಸಾಧಿಸಿದ್ದಾರೆ. ತೀರ್ಥಾನಂದ ದುಗ್ಗಳ ಅವರು 1,113 ಮತಗಳನ್ನು ಪಡೆದುಕೊಂಡಿದ್ದರೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿದ್ದ ಪುತ್ತೂರು ಬ್ಲಾಕ್ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಮಹೇಶ್ ರೈ ಅಂಕೋತಿಮಾರು ಅವರು 1,110 ಮತಗಳನ್ನು ಪಡೆದಿದ್ದಾರೆ. ಜೆಡಿಎಸ್ ಅ್ಯರ್ಥಿಯಾಗಿದ್ದ ಅಶ್ರಫ್ ಕೊಟ್ಯಾಡಿ ಕೇವಲ 18 ಮತಗಳನ್ನು ಮಾತ್ರ ಪಡೆಯುವಲ್ಲಿ ಶಕ್ತರಾಗಿದ್ದಾರೆ.







