ವಿಶ್ವನಾಥ್ ಜೆಡಿಎಸ್ ಸೇರ್ಪಡೆ ಖಚಿತ: ಕುಮಾರಸ್ವಾಮಿ

ಹುಬ್ಬಳ್ಳಿ, ಎ. 27: ರಾಜ್ಯದಲ್ಲಿ ಪಕ್ಷಾಂತರ ಪರ್ವ ಆರಂಭವಾಗಿದ್ದು, ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಎಚ್.ವಿಶ್ವನಾಥ್ ಜೆಡಿಎಸ್ ಸೇರ್ಪಡೆಗೊಳ್ಳುವುದು ಬಹುತೇಕ ಖಚಿತವಾಗಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ತಿಳಿಸಿದ್ದಾರೆ.
ಗುರುವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈಗಾಗಲೇ ವಿಶ್ವನಾಥ್ ಅವರೊಂದಿಗೆ ಒಂದು ಸುತ್ತಿನ ಮಾತುಕತೆ ನಡೆಸಲಾಗಿದೆ. ಭವಿಷ್ಯದ ದೃಷ್ಟಿಯಿಂದ ಸೂಕ್ತ ನಿರ್ಧಾರವನ್ನು ಕೈಗೊಳ್ಳಲಿದ್ದಾರೆಂಬ ಭರವಸೆ ನನಗಿದೆ ಎಂದು ನುಡಿದರು.
‘ಜೆಡಿಎಸ್ ಅಪ್ಪ-ಮಕ್ಕಳ ಪಕ್ಷ’ ಎಂದು ಟೀಕಿಸಿದ್ದಾರಲ್ಲ ಎಂಬ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಇತಿಹಾಸದಲ್ಲೆ ಕಾಂಗ್ರೆಸ್ ಪಕ್ಷವನ್ನು ಸಿದ್ದರಾಮಯ್ಯ ಬೈದಷ್ಟು ಬೇರೆ ಯಾರೂ ಬೈದಿರಲು ಸಾಧ್ಯವಿಲ್ಲ. ಆದರೆ, ಇದೀಗ ಅವರೇ ಆ ಪಕ್ಷದಿಂದ ಮುಖ್ಯಮಂತ್ರಿ ಆಗಲಿಲ್ಲವೇ ಎಂದು ಮರು ಪ್ರಶ್ನೆ ಹಾಕಿದರು.
ಕೆಲ ಸಂದರ್ಭಗಳಲ್ಲಿ ರಾಜಕೀಯ ಕಾರಣಗಳಿಗಾಗಿ ಪರಸ್ಪರ ನಿಂದನೆ ಸಹಜ. ಆಯಾ ಸನ್ನಿವೇಶಕ್ಕೆ ತಕ್ಕಂತೆ ಕಟುವಾದ ಶಬ್ದಗಳನ್ನು ಬಳಸುತ್ತಾರೆ. ಅದನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿಲ್ಲ ಎಂದ ಅವರು, ವಿಶ್ವನಾಥ್ ಜೆಡಿಎಸ್ ಸೇರ್ಪಡೆ ನಿಶ್ಚಿತ ಎಂದರು.
ಅವಧಿಗೆ ಮೊದಲೆ ಚುನಾವಣೆ: ವಿಧಾನಸಭೆಗೆ ಅವಧಿಗೆ ಮೊದಲೆ ಚುನಾವಣೆ ನಡೆಯಲಿದೆ. ರಾಜ್ಯದ 224 ಕ್ಷೇತ್ರಗಳಲ್ಲೂ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು. ಯಾವುದೇ ಪಕ್ಷದೊಂದಿಗೂ ಮೈತ್ರಿ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಉಪ ಚುನಾವಣಾ ಫಲಿತಾಂಶ ಮುಂದಿನ ಚುನಾವಣೆಗೆ ದಿಕ್ಸೂಚಿಯಲ್ಲ. ಉತ್ತರ ಕರ್ನಾಟಕದಲ್ಲಿ ಜೆಡಿಎಸ್ ಬೇರು ಮಟ್ಟದಲ್ಲಿ ಸಂಘಟಿಸುವ ಸಲುವಾಗಿ ಹುಬ್ಬಳ್ಳಿಯಲ್ಲಿ ವಾಸ್ತವ್ಯ ಹೂಡಿದ್ದು, ಜಿಲ್ಲಾ ಮತ್ತು ತಾಲೂಕುವಾರು ಕಾರ್ಯಕರ್ತರ ಸಭೆ ನಡೆಸಲಾಗುವುದು ಎಂದರು.
‘ಬಂಡಾಯ ಶಾಸಕರು ನಮ್ಮ ಪಕ್ಷಕ್ಕೆ ಅಗತ್ಯವಿಲ್ಲ. ಅವರು ಕಾಂಗ್ರೆಸ್ ಪಕ್ಷಕ್ಕಾದರೂ ಹೋಗಲಿ ಅಥವಾ ಟ್ರಂಪ್ ಪಕ್ಷಕ್ಕಾದರೂ ಸೇರಲಿ, ನಮ್ಮದೇನು ತಕರಾರು ಇಲ್ಲ. ಪಕ್ಷ ಹೆತ್ತ ತಾಯಿ ಇದ್ದಂತೆ, ಆ ತಾಯಿಗೆ ಬೆಲೆ ನೀಡದೆ ದ್ರೋಹ ಬಗೆದವರು, ಇನ್ನು ದೇವರಿಗೆ ಬೆಲೆ ಕೊಡುವರೇ’
-ಎಚ್.ಡಿ.ಕುಮಾರಸ್ವಾಮಿ ಜೆಡಿಎಸ್ ರಾಜ್ಯಾಧ್ಯಕ್ಷ







