ಪರ ಪುರುಷರನ್ನು ನೋಡಿದ್ದಕ್ಕೆ ಪತಿಯಿಂದ ಹಲ್ಲೆ ಪ್ರಕರಣ: ಪತ್ನಿ ಸಾವು
ಬೆಂಗಳೂರು, ಎ.27: ಪರ ಪುರುಷರನ್ನು ನೋಡಿದಕ್ಕೆ ಪತಿಯಿಂದ ಗಂಭೀರ ಹಲ್ಲೆಗೊಳಗಾಗಿದ್ದ ರಾಧಾ(24) ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಗುರುವಾರ ಬೆಳಗ್ಗೆ ಮೃತಪಟ್ಟಿದ್ದಾರೆ.
ಪರಪುರುಷನನ್ನು ನೋಡಿದ್ದಾಳೆ ಎಂದು ಆರೋಪಿಸಿ ಪತ್ನಿ ರಾಧಾಳ ಮೇಲೆ ಪತಿ ಮುನ್ನಾ ಗಂಭೀರವಾಗಿ ಹಲ್ಲೆ ನಡೆಸಿದ್ದು, ಕಣ್ಣಿನ ಗುಡ್ಡೆ ಕಿತ್ತು ಹೊರಬಂದಿತ್ತು. ಬಳಿಕ ರಾಧಾಳನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ.
ಕಳೆದ ಹದಿನೈದು ದಿನಗಳ ಹಿಂದೆ ನಗರಕ್ಕೆ ಬಂದಿದ್ದ ದಂಪತಿ ಡೆವ್‌ಲಪರ್ಸ್ ಕಂಪೆನಿಯೊಂದರಲ್ಲಿ ಕೂಲಿ ಕೆಲಸಕ್ಕೆ ಸೇರಿಕೊಂಡು ನಾಗೇನಹಳ್ಳಿಯಲ್ಲಿ ವಾಸವಾಗಿದ್ದರು. ಬುಧವಾರ ಮಧ್ಯಾಹ್ನ ಬೇರೆ ಪುರುಷರನ್ನು ನೋಡಬಾರದೆಂದು ರಾಧಾಳ ಜೊತೆ ಜಗಳ ತೆಗೆದ ಮುನ್ನಾ ರೊಟ್ಟಿ ಮಾಡುವ ಹೆಂಚಿ(ತವಾ)ನಿಂದ ಹೊಡೆದು ಕಣ್ಣು ಕಿತ್ತು, ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣ ಸಂಬಂಧ ಕೊತ್ತನೂರು ಠಾಣಾ ಪೊಲೀಸರು ಆರೋಪಿ ಮುನ್ನಾನನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.





