ರಿಯಲ್ ಎಸ್ಟೇಟ್ ಉದ್ಯಮಿಯ ಹತ್ಯೆ
ಬೆಂಗಳೂರು, ಎ.27: ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರನ್ನು ಹತ್ಯೆಗೈದಿರುವ ಘಟನೆ ಇಲ್ಲಿನ ಸುಬ್ರಹ್ಮಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ರಾಜರಾಜೇಶ್ವರಿ ನಗರದ ಚೆನ್ನಸಂದ್ರದ ನಿವಾಸಿ ವಿಲ್ಸನ್ (28) ಎಂಬವರು ಕೊಲೆಯಾಗಿರುವ ಉದ್ಯಮಿ ಎಂದು ಪೊಲೀಸರು ಗುರುತಿಸಿದ್ದಾರೆ.
ಬುಧವಾರ ರಾತ್ರಿ 10ರ ವೇಳೆ ಇಟ್ಟಮಡುನಲ್ಲಿದ್ದ ಸ್ನೇಹಿತ ಆಟೊ ಸುನಿಲ್‌ನನ್ನು ಭೇಟಿ ಮಾಡಿ ಮನೆಗೆ ವಾಪಸ್ ಕಾರಿನಲ್ಲಿ ಹೋಗುತ್ತಿದ್ದಾಗ ಸುಬ್ರಹ್ಮಣ್ಯಪುರದ ಎಜಿಎಸ್ ಲೇಔಟ್ ಬಳಿ ಮೂರು ಬೈಕ್‌ಗಳಲ್ಲಿ ಬಂದ ನಾಲ್ಕೈದು ಮಂದಿ ದುಷ್ಕರ್ಮಿಗಳು ಅಡ್ಡಗಟ್ಟಿದ್ದಾರೆ. ಕಾರು ನಿಲ್ಲಿಸಿದ ತಕ್ಷಣ ವಿಲ್ಸನ್‌ನನ್ನು ಹೊರಗೆಳೆದು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಮನಸೋ ಇಚ್ಚೆ ಹೊಡೆದು ಕೊಲೆಗೈದು ಪರಾರಿಯಾಗಿದ್ದಾರೆೆ.
ಪ್ರಕರಣ ದಾಖಲಿಸಿರುವ ಸುಬ್ರಹ್ಮಣ್ಯಪುರ ಪೊಲೀಸರು ಕತ್ಯವೆಸಗಿ ಪರಾರಿಯಾಗಿರುವ ಕುಳ್ಳ ಸುನಿಲ್ ಗುಂಪಿನ ಸದಸ್ಯರ ಬಂಧನಕ್ಕೆ ತೀವ್ರ ಶೋಧ ನಡೆಸಿದ್ದಾರೆ. ಕೊಲೆಯಾದ ವಿಲ್ಸನ್ ಹತ್ತು ವರ್ಷಗಳ ಹಿಂದೆ ಕೆಲ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ಖುಲಾಸೆಗೊಂಡು ಚೆನ್ನಸಂದ್ರದಲ್ಲಿ ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದರು ಎಂದು ತಿಳಿದುಬಂದಿದೆ.