ತನ್ನದಲ್ಲದ ತಪ್ಪಿಗೆ ಉಗಾಂಡಾದ ಜೈಲಿನಲ್ಲಿ ಶಿಕ್ಷೆ ಅನುಭವಿಸಿದ ಬೆಳ್ತಂಗಡಿ ನಿವಾಸಿ ಕೊನೆಗೂ ತವರಿಗೆ
"ಆಪರೇಶನ್ ಉಗಾಂಡ" ಸಕ್ಸಸ್

ಬೆಳ್ತಂಗಡಿ, ಎ.27: ಒಂದು ವರ್ಷದಿಂದ ಉಗಾಂಡಾದ ಜೈಲಿನಲ್ಲಿದ್ದ ಬೆಳ್ತಂಗಡಿ ತಾಲೂಕಿನ ಪಣಕಜೆ ನಿವಾಸಿ ರಶೀದ್ ಶಾಫಿ ಕೊನೆಗೂ ತನ್ನ ಮಿತ್ರರ ಹಾಗೂ ಸಹೃದಯಿಗಳ ನೆರವಿನಿಂದ ಭಾರತಕ್ಕೆ ಹಿಂತಿರುಗಿದ್ದಾರೆ.
ಬೆಳ್ತಂಗಡಿ ತಾಲೂಕಿನ ಮಾಲಾಡಿ ಗ್ರಾಮದ ಪಣಕಜೆ ನಿವಾಸಿ ಮುಹಮ್ಮದ್ ಶಾಫಿ ಎಂಬವರ ಪುತ್ರ ರಶೀದ್ ಶಾಫಿ ವಿದೇಶದಲ್ಲಿ ಹಲವಾರು ಸಂಕಷ್ಟಗಳನ್ನು ಎದುರಿಸಿ ಇದೀಗ ಕಂಪೆನಿಗೆ ಪಾವತಿಸಬೇಕಾಗಿದ್ದ ದಂಡವನ್ನು ಪಾವತಿಸಿದ ಬಳಿಕ ದೇಶಕ್ಕೆ ಮರಳಿದ್ದಾರೆ. ತನ್ನದಲ್ಲದ ತಪ್ಪಿಗೆ ವರ್ಷದ ಹಿಂದೆ ರಶೀದ್ ಮೇಲೆ ಕಂಪೆನಿ ಮಾಲಕ ಪ್ರಕರಣ ದಾಖಲಿಸಿ, ರಶೀದ್ ರನ್ನು ಬಂಧಿಸಲಾಗಿತ್ತು. ಜಾಮೀನು ಪಡೆದು ಜೈಲಿನಿಂದ ಹೊರ ಬಂದರೂ ದೇಶಕ್ಕೆ ಹಿಂತಿರುಗಲಾರದೆ ಪತ್ನಿ ಹಾಗೂ ಮೂವರು ಮಕ್ಕಳೊಂದಿಗೆ ಅತಂತ್ರ ಸ್ಥಿತಿಯಲ್ಲಿ ಅವರು ಬದುಕನ್ನು ನಡೆಸುತ್ತಿದ್ದರು.
ಈ ಬಗ್ಗೆ ರಶೀದ್ ರ ತಂದೆ ಮುಹಮ್ಮದ್ ಶಾಫಿ ತನ್ನ ಮಗನಿಗೆ ನ್ಯಾಯ ಒದಗಿಸುವಂತೆ ಸರಕಾರಗಳಲ್ಲಿ, ರಾಜಕಾರಣಿಗಳಲ್ಲಿ ಬೇಡಿಕೊಂಡಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಈ ಕುಟುಂಬದ ಸಮಸ್ಯೆಯನ್ನು ತಿಳಿದ ಹಲವರು ಸೇರಿ "ಆಪರೇಶನ್ ಉಗಾಂಡ" ಎಂಬ ಹೆಸರಿನಲ್ಲಿ ನಡೆಸಿದ ಪ್ರಯತ್ನ ಕೊನೆಗೂ ಯಶಸ್ವಿಯಾಗಿದೆ. ವಾಟ್ಸ್ಯಾಪ್ಪ್ ಗ್ರೂಪ್‌ಗಳ ಮೂಲಕವೇ ಅಲ್ಲಿ ಕಟ್ಟಬೇಕಾಗಿದ್ದ ಸುಮಾರು ಐದು ಲಕ್ಷದಷ್ಟು ಹಣವನ್ನೂ ಹೊಂದಾಣಿಕೆ ಮಾಡಲಾಯಿತು. ಮಂಗಳೂರಿನ ಎಂ.ಫ್ರೆಂಡ್ಸ್ ಟ್ರಸ್ಟ್, ಹೋಪ್ ಫೌಂಡೇಶನ್, ದುಬೈಯ ಅಲ್ ಫಲಾಹ್ ಸಮೂಹ, ಉಗಾಂಡಾದ ತಮಿಳು ಅಸೋಸಿಯೇಶನ್ ಹೀಗೆ ಹಲವರು ಇದರಲ್ಲಿ ಕೈಜೋಡಿಸಿದ್ದಾರೆ ಎನ್ನುತ್ತಾರೆ ರಶೀದ್.
ಜೈಲಿನಿಂದ ಹೊರ ಬಂದ ಬಳಿಕ ದುಡಿಯಲೂ ಆಗದೆ, ಕೈಯಲ್ಲಿ ಹಣವೂ ಇಲ್ಲದೆ ಒಂದು ಹೊತ್ತಿನ ಊಟಕ್ಕೂ ಪರದಾಡಬೇಕಾಗಿತ್ತು. ಈ ಸಂದರ್ಭ ಸ್ಥಳೀಯರು ನೆರವಾಗಿದ್ದರು. ಬಳಿಕ ಭಾರತದಿಂದ ಬಂದ ನೆರವೇ ನಮ್ಮನ್ನು ಬದುಕಿಸಿತ್ತು ಎನ್ನುತ್ತಾರೆ ರಶೀದ್.
ಆರಂಭದಲ್ಲಿ ಉಗಾಂಡಾದಲ್ಲಿದ್ದ ರಶೀದ್ ಅವರ ಪತ್ನಿ ಮತ್ತು ಮಕ್ಕಳನ್ನು ತಿಂಗಳ ಹಿಂದೆ ಭಾರತಕ್ಕೆ ಕರೆತರಲಾಯಿತು. ಬಳಿಕ ದಂಡ ಪಾವತಿಸಿ ನ್ಯಾಯಾಲಯದಲ್ಲಿದ್ದ ಪ್ರಕರಣವನ್ನು ಕೊನೆಗೊಳಿಸಿ ರಶೀದ್ ಅವರ ಪಾಸ್ ಪೋರ್ಟ್ ಪಡೆದು ಭಾರತಕ್ಕೆ ಹಿಂತಿರುಗಲು ಅವಕಾಶ ಒದಗಿಸಲಾಯಿತು.
ಹೊಟ್ಟೆಪಾಡಿಗಾಗಿ ದುಡಿಯಲು ಉಗಾಂಡಕ್ಕೆ ಹೋಗಿದ್ದೆ. ಅಲ್ಲಿ ಸುಮಾರು ಎಂಟು ವರ್ಷಗಳ ಕಾಲ ದುಡಿದಿದ್ದೇನೆ. ಆದರೆ ತನ್ನದಲ್ಲದ ತಪ್ಪಿಗೆ ಜೈಲಿಗೆ ಹೋಗಬೇಕಾಗಿ ಬಂದಿತ್ತು. ಪ್ರಭಾವಿಯಾಗಿದ್ದ ಕಂಪೆನಿಯವರು ಕೇಳಿದಷ್ಟು ದಂಡ ನೀಡದೆ ಹೊರಬರಲು ಸಾಧ್ಯವಿಲ್ಲದ ಸ್ಥಿತಿ ನಿರ್ಮಾಣವಾಗಿತ್ತು. ಭಾರತದ ರಾಯಭಾರಿ ಕಚೇರಿಯೂ ಅಗತ್ಯ ಸಂದರ್ಭಗಳಲ್ಲಿ ನೆರವಿಗೆ ಬರಲಿಲ್ಲ. ಆದರೂ ಸಹೃದಯಿ ಸ್ನೇಹಿತರ ನೆರವಿನಿಂದ ಇದೀಗ ಭಾರತಕ್ಕೆ ಹಿಂತಿರುಗಲು ಸಾಧ್ಯವಾಯಿತು.
-ರಶೀದ್ ಶಾಫಿ







