ಮೌಢ್ಯ ಆಚರಣೆ ಕೈಬಿಡಿ: ಬಿ.ಟಿ. ಲಲಿತಾನಾಯಕ್

ಚಾಮರಾಜನಗರ, ಎ.27 : ಮೌಢ್ಯ ಆಚರಣೆ ಸಂಪ್ರದಾಯಗಳನ್ನು ಕೈಬಿಟ್ಟು ಅಂಬೇಡ್ಕರ್ ಅವರ ವೈಜ್ಞಾನಿಕ ವಿಚಾರಧಾರೆಗಳನ್ನು ಅಳವಡಿಸಿಕೊಳ್ಳಬೇಕಾದ ಅಗತ್ಯವಿದೆ ಎಂದು ಖ್ಯಾತ ಸಾಹಿತಿ ಹಾಗೂ ಮಾಜಿ ಸಚಿವೆ ಬಿ.ಟಿ. ಲಲಿತಾನಾಯಕ್ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಮಾಜ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಅಂಬೇಡ್ಕರ್ ಜನ್ಮದಿನಾಚರಣೆ ಅಂಗವಾಗಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಕೊಡುಗೆ ಚಿಂತನೆಗಳ ಕುರಿತು ನಡೆದ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ "ಮೌಢ್ಯ ವಿಮೋಚನೆಗೆ ಬಾಬಾ ಸಾಹೇಬರ ಚಿಂತನೆಗಳು" ಎಂಬ ವಿಷಯ ಕುರಿತು ಅವರು ಮಾತನಾಡಿದರು.
ಅಂಬೇಡ್ಕರ್ ಅವರು ಎಲ್ಲ ಜನರ ಸಂಸ್ಕೃತಿ ಒಳಿತಿಗಾಗಿ ಕಾನೂನು ರೂಪಿಸಲು ಹೊರಟರು. ತಾಯಿ ಕರುಳಿನ ಸ್ವಭಾವದ ಅಂಬೇಡ್ಕರ್ ಅವರು ಅವರ ಖಾಸಗಿ ಬದುಕಿನ ಸುಖದ ಬಗ್ಗೆ ಚಿಂತೆ ಮಾಡಲಿಲ್ಲ. ಸರ್ವಜನರ ಶ್ರೇಯೋಭಿವೃದ್ಧಿಗೆ ಶ್ರಮಿಸಿದ ಫಲವಾಗಿ ಇಂದಿನ ಪೀಳಿಗೆ ಅನುಕೂಲ ಪಡೆಯಲು ಸಾಧ್ಯವಾಗಿದೆ ಎಂದು ಲಲಿತಾನಾಯಕ್ ಅಭಿಪ್ರಾಯ ತಿಳಿಸಿದರು.
ಶಾಸಕರಾದ ಎಸ್. ಜಯಣ್ಣ ಮಾತನಾಡಿದರು. ಜಿಲ್ಲಾಧಿಕಾರಿ ಬಿ. ರಾಮು ಕಾರ್ಯಕ್ರಮ ಉದ್ಘಾಟಿಸಿದರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕೆ. ಹರೀಶ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಪ್ರಸ್ತಾವಿತ ನಳಂದ ಬೌದ್ಧ ವಿಶ್ವವಿದ್ಯಾನಿಲಯದ ಬೋಧಿತತ್ವ ಬಂತೇಜಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಲದೀಪ್ ಕುಮಾರ್ ಆರ್. ಜೈನ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರಾದ ಕೆ. ಸತೀಶ್, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಮುನಿರಾಜಪ್ಪ, ವಿಚಾರ ಸಂಕಿರಣ ಸಮಿತಿಯ ಅಧ್ಯಕ್ಷರಾದ ಕೃಷಿ ಜಂಟಿನಿರ್ದೇಶಕರಾದ ತಿರುಮಲೇಶ್ ಉಪಸ್ಥಿತರಿದ್ದರು.







