ಪ್ರಿನ್ಸ್ ಹುಲಿಯ ಹಲ್ಲು ಮಾರಾಟ ಪ್ರಕರಣ: ಮೂವರ ಬಂಧನ

ಗುಂಡ್ಲುಪೇಟೆ, ಎ.27: ಬಂಡೀಪುರ ಅಭಯಾರಣ್ಯದ ರಾಯಭಾರಿಯಾಗಿದ್ದ ಪ್ರಿನ್ಸ್ ಹುಲಿ ಸಾವನ್ನಪ್ಪಿದ್ದ ಸಂದರ್ಭ ಹುಲಿಯ ಮುಖ ವಿರೂಪಗೊಳಿಸಿ, ಹಲ್ಲುಗಳನ್ನು ಕದ್ದೊಯ್ದು ಮಾರಾಟ ಮಾಡಿದ್ದ ಮೂವರು ಆರೋಪಿಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿದ್ದಾರೆ.
ತಾಲೂಕಿನ ಕಾಡಂಚಿನ ಚೆಲುವರಾಯನಪುರ ಗ್ರಾಮದ ಸೋಮ ಮತ್ತು ಬೊಮ್ಮ, ಹುಂಡೀಪುರದ ಚಿನ್ನಸ್ವಾಮಿ ಎಂಬವರು ಬಂಧಿತ ಆರೋಪಿಗಳಾಗಿದ್ದಾರೆ.
ಎ.2ರಂದು ಬಂಡೀಪುರ ರಾಷ್ಟ್ರೀಯ ಉದ್ಯಾನದ ಕುಂದಕೆರೆ ವಲಯದ ಲೊಕ್ಕೆರೆಬೀಟ್‌ನಲ್ಲಿ ಪ್ರಿನ್ಸ್‌ಹುಲಿ ಸಾವನ್ನಪ್ಪಿತ್ತು. ಈ ಸಂದರ್ಭ ಕಾಡಿನೊಳಗೆ ಅಕ್ರಮವಾಗಿ ಪ್ರವೇಶ ಮಾಡಿದ್ದ ಸೋಮ ಮತ್ತು ಬೊಮ್ಮ ಸತ್ತ ಹುಲಿಯ ಮುಖದ ಭಾಗವನ್ನುಮಚ್ಚಿನಿಂದ ಕತ್ತರಿಸಿ ಮೂರು ಹಲ್ಲುಗಳನ್ನು ಕದ್ದೊಯ್ದಿದ್ದರು. ಪ್ರಿನ್ಸ್ ಹುಲಿ ಸತ್ತಿರುವುದು ಮತ್ತು ಮುಖದ ಭಾಗ ವಿಕಾರವಾಗಿರುವುದನ್ನು ಕಂಡ ಅರಣ್ಯಾಧಿಕಾರಿಗಳು ಮೂವರು ತನಿಖೆ ನಡೆಸಿದ್ದು, ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಘಟನೆ ವಿವರ: ಸೋಮ ಆನೆದಂತ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯಾಗಿದ್ದ. ಈ ಹಿನ್ನೆಲೆಯಲ್ಲಿ ಈತ ಪ್ರತಿವಾರವೂ ಅರಣ್ಯ ಕಚೇರಿಗೆ ಬಂದು ಸಹಿ ಮಾಡಬೇಕಾಗಿತ್ತು. ಸೋಮನ ಮೇಲೆ ಅನುಮಾನಗೊಂಡ ಅರಣ್ಯ ಸಿಬ್ಬಂದಿ ಆತನನ್ನು ವಿಚಾರಣೆಗೊಳಪಡಿಸಿದ್ದಾರೆ. ಹುಂಡೀಪುರದ ಚಿನ್ನಸ್ವಾಮಿ ಎಂಬಾತ ಹುಲಿ ಚರ್ಮದ ಕೇಸಿನಲ್ಲಿ ಆರೋಪಿಯಾಗಿದ್ದ. ಆರೋಪಿ ಸೋಮ ಮತ್ತು ಬೊಮ್ಮ ಒಂದು ಹಲ್ಲಿಗೆ ಒಂದು ಸಾವಿರದಂತೆ ಚಿನ್ನಸ್ವಾಮಿಗೆ ಮಾರಾಟ ಮಾಡಿದ್ದಾನೆ. ಉಳಿದ ಎರಡು ಹಲ್ಲುಗಳನ್ನು ಮನೆಯಲ್ಲಿರಿಸಿಕೊಂಡಿದ್ದ ಎನ್ನುವ ಸಂಗತಿ ವಿಚಾರಣೆ ವೇಳೆಯಲ್ಲಿ ಬಹಿರಂಗಪಡಿಸಿದ್ದಾನೆ.
ಅರಣ್ಯ ಇಲಾಖೆ ಸಿಬ್ಬಂದಿ ಮೂವರು ಆರೋಪಿಗಳನ್ನು ಬಂಧಿಸಿ ಕೇಸು ದಾಖಲಿಸಿ ನ್ಯಾಯಾಲಯದ ಬಂಧನಕ್ಕೆ ಒಪ್ಪಿಸಿದ್ದಾರೆ
ಕಾರ್ಯಾಚರಣೆಯಲ್ಲಿ ಎಸಿಎಫ್ ಪೂವಯ್ಯ, ಆರ್.ಎಫ್.ಒ.ಶಿವಾನಂದ ಮುಗುದುಂ, ನವೀನ್‌ಕುಮಾರ್, ಡಿ.ಆರ.ಎಫ್.ಒ. ಮೈಲಾರಪ್ಪ, ಗಾರ್ಡ್ ರವಿಕುಮಾರ್, ಎಸ್.ಟಿ.ಪಿ.ಎಫ್. ಸಿಬ್ಬಂದಿ ಭಾಗಿಯಾಗಿದ್ದರು.








