ಶನಿ ಮತ್ತು ಉಂಗುರಗಳ ನಡುವೆ ಯಶಸ್ವಿಯಾಗಿ ನುಸುಳಿದ ‘ಕ್ಯಾಸಿನಿ’

ವಾಶಿಂಗ್ಟನ್, ಎ. 27: ಶನಿ ಗ್ರಹ ಮತ್ತು ಅದರ ಉಂಗುರಗಳ ನಡುವಿನ ಕಿರು ಅಂತರದಲ್ಲಿ ನುಸುಳಿಕೊಂಡು ಹೋಗುವ ತನ್ನ ಚೊಚ್ಚಲ ಪ್ರಯತ್ನದಲ್ಲಿ ‘ಕ್ಯಾಸಿನಿ’ ಬಾಹ್ಯಾಕಾಶ ನೌಕೆ ಬುಧವಾರ ಯಶಸ್ವಿಯಾಗಿದೆ ಎಂದು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಗುರುವಾರ ಹೇಳಿದೆ.
ನುಸುಳಿಕೊಂಡು ಹೋದ ಸಂದರ್ಭದಲ್ಲಿ ಸಂಗ್ರಹಿಸಲಾದ ವೈಜ್ಞಾನಿಕ ಮತ್ತು ಇಂಜಿನಿಯರಿಂಗ್ ಮಾಹಿತಿಯನ್ನು ಭೂಮಿಗೆ ಕಳುಹಿಸುವ ಪ್ರಕ್ರಿಯೆಯಲ್ಲಿ ‘ಕ್ಯಾಸಿನಿ’ ಈಗ ತೊಡಗಿಕೊಂಡಿದೆ.
ಕ್ಯಾಲಿಫೋರ್ನಿಯದ ಮೊಜಾವ್ ಡೆಸರ್ಟ್‌ನಲ್ಲಿರುವ ನಾಸಾದ ಡೀಪ್ ಸ್ಪೇಸ್ ನೆಟ್‌ವರ್ಕ್ ಗೋಲ್ಡ್‌ಸ್ಟೋನ್ ಕಾಂಪ್ಲೆಕ್ಸ್ ಇಡಿಟಿ (ಸಮಯ) ಗುರುವಾರ 2:56ಕ್ಕೆ ಕ್ಯಾಸಿನಿಯಿಂದ ಸಂಕೇತಗಳನ್ನು ಪಡೆದುಕೊಂಡಿತು ಹಾಗೂ ಇಡಿಟಿ 3.01ಕ್ಕೆ ಮಾಹಿತಿ ಹರದು ಬರಲಾರಂಭಿಸಿತು ಎಂದು ನಾಸಾ ಹೇಳಿದೆ.
ಇದೇ ಸಂದರ್ಭದಲ್ಲಿ ಕ್ಯಾಸಿನಿ ಅತ್ಯಂತ ಸಮೀಪದಿಂದ ತೆಗೆದ ಶನಿ ಗ್ರಹದ ಚಿತ್ರಗಳನ್ನೂ ನಾಸಾ ಬಿಡುಗಡೆಗೊಳಿಸಿದೆ. ಕ್ಯಾಸಿನಿ ಒಳ ನುಸುಳಿದಾಗ ಶನಿ ಗ್ರಹದ ಹೊರಗಿನ ಮೋಡಗಳಿಂದ ಸುಮಾರು 3,000 ಕಿ.ಮೀ. ಹಾಗೂ ಅದರ ಉಂಗುರಗಳ ಅತ್ಯಂತ ಒಳಗಿನ ದೃಗ್ಗೋಚರ ತುದಿಯಿಂದ ಸುಮಾರು 300 ಕಿ.ಮೀ.ಗಳ ಅಂತರದಲ್ಲಿತ್ತು.





