ಮಸಾಜ್‌ಪಾರ್ಲರ್‌ಗಳಿಗೆ ಪೊಲೀಸ್ ದಾಳಿ: ನಾಲ್ವರ ಬಂಧನ

ಮಂಗಳೂರು, ಎ. 27: ನಗರದ ಎರಡು ಕಡೆ ಕಾರ್ಯಾಚರಿಸುತ್ತಿದ್ದ ಅನಧಿಕೃತ ಮಸಾಜ್ ಪಾರ್ಲರ್‌ಗಳಿಗೆ ಕದ್ರಿ ಠಾಣಾ ಪೊಲೀಸರು ಗುರುವಾರ ದಾಳಿ ನಡೆಸಿ ನಾಲ್ವರನ್ನು ಬಂಧಿಸಿ, 7 ಮಂದಿ ಯುವತಿಯರನ್ನು ರಕ್ಷಿಸಿದ್ದಾರೆ.
ಕೇರಳದ ಸಿಜೇಶ್ (30), ಜೀವನ್ (21), ಎಡಪದವು ಪವನ್ (21), ಪುತ್ತೂರು ಕಬಕ ನಿವಾಸಿ ಸತೀಶ್ (29) ಬಂಧಿತ ಆರೋಪಿಗಳು.
ಕದ್ರಿ ಇನ್‌ಸ್ಪೆಕ್ಟರ್ ಮಾರುತಿ ನಾಯಕ್ ನೇತೃತ್ವದಲ್ಲಿ ಪಿಎಸ್‌ಐ ಹರೀಶ್, ಎಎಸ್‌ಐ ಶಶಿಧರ ಶೆಟ್ಟಿ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ. ಆರ್ಯ ಸಮಾಜ ರಸ್ತೆಯಲ್ಲಿರುವ ಅಪಾರ್ಟ್‌ಮೆಂಟ್‌ವೊಂದರಲ್ಲಿ ನಡೆಸುತ್ತಿದ್ದ ಮಸಾಜ್ ಪಾರ್ಲರ್‌ಗೆ ದಾಳಿ ಪೊಲೀಸರು ನಡೆಸಿದ್ದಾರೆ. ಈ ವೇಳೆ ಕೇರಳದ ಸಿಜೇಶ್ ಮತ್ತು ಜೀವನ್‌ನನ್ನು ಬಂಧಿಸಲಾಗಿದ್ದು, 3000 ರೂ. ಹಾಗೂ ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದೇ ಪಾರ್ಲರ್‌ನಲ್ಲಿ ಕೆಲಸ ಮಾಡುತ್ತಿದ್ದ 4 ಮಂದಿ ಯುವತಿಯರನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ. ಪಾರ್ಲರ್ ಮಾಲಕ ತಲೆಮರೆಸಿಕೊಂಡಿದ್ದು, ಆತನ ವಿರುದ್ಧ ಪ್ರಕರಣ ದಾಖಲಾಗಿದೆ.
ಬೆಂದೂರುವೆಲ್‌ನ ಅಪಾರ್ಟ್‌ಮೆಂಟ್‌ವೊಂದರ ತಳಮಹಡಿಯಲ್ಲಿ ಅಕ್ರಮವಾಗಿ ಕಾರ್ಯಾಚರಿಸುತ್ತಿದ್ದ ಇನ್ನೊಂದು ಮಸಾಜ್ ಪಾರ್ಲರ್‌ಗೂ ಪೊಲೀಸರು ದಾಳಿ ನಡೆಸಿದ್ದಾರೆ. ಎಡಪದವು ಪವನ್, ಪುತ್ತೂರು ಕಬಕದ ಸತೀಶ್ ಎಂಬವರನ್ನು ಬಂಧಿಸಿ, ಮೂವರು ಯುವತಿಯರನ್ನು ರಕ್ಷಿಸಿದ್ದಾರೆ. ಸ್ಥಳದಿಂದ ನಗದು ಹಾಗೂ ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಮಾಲಕಿಯ ವಿರುದ್ಧ ಪ್ರಕರಣ ದಾಖಲಾಗಿದೆ.





