ಬಂಟ್ವಾಳ ಪುರಸಭಾ ಬಜೆಟ್‌ನ ಹಣಕಾಸಿನ ಅಂಕಿ ಅಂಶದಲ್ಲಿ ಲೋಪದೋಷ : ಬಿಜೆಪಿ ಸದಸ್ಯರಿಂದ ಧರಣಿ.

ಬಂಟ್ವಾಳ, ಎ. 27: ಇತ್ತೀಚೆಗೆ ಪುರಸಭೆ ಮಂಡಿಸಿದ ಬಜೆಟ್‌ನಲ್ಲಿ ಲೋಪದೋಷಗಳು ಇದೆ ಎಂದು ಕುರಿತು ಸಲ್ಲಿಸಿದ ದೂರಿನನ್ವಯ ನಡೆಸಿದ ತನಿಖೆಯಲ್ಲಿ ವ್ಯತ್ಯಾಸ ಇರುವುದು ದೃಢಪಟ್ಟಿದೆ.
ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಸಭೆಗೆ ಆಗಮಿಸಿ ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿ ಸದಸ್ಯ ದೇವದಾಸ ಶೆಟ್ಟಿ ನೇತೃತ್ವದಲ್ಲಿ ಬಿಜೆಪಿ ಸದಸ್ಯರು ಗುರುವಾರ ನಡೆದ ಪುರಸಭಾ ಸಾಮಾನ್ಯ ಸಭೆಯಲ್ಲಿ ಧರಣಿ ನಡೆಸಿದರು.
ಅಧ್ಯಕ್ಷ ಪಿ.ರಾಮಕೃಷ್ಣ ಆಳ್ವ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ದೇವದಾಸ ಶೆಟ್ಟಿ, ಪುರಸಭೆ ಮಂಡಿಸಿದ ಬಜೆಟ್‌ನ ಹಣಕಾಸಿನ ಅಂಕಿ ಅಂಶದಲ್ಲಿ ಕೋಟ್ಯಾಂತರ ರೂಪಾಯಿ ವ್ಯತ್ಯಾಸವಿದೆ. ಈ ಕುರಿತು ತಾನು ನೀಡಿದ ದೂರಿನ ತನಿಖೆ ಪುತ್ತೂರಿನ ಲೆಕ್ಕಾಧಿಕಾರಿಯವರಿಂದ ಆಗಿದೆ. ಇದರಲ್ಲಿ ಲೋಪದೋಷಗಳು ಇರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಯೋಜನಾ ನಿರ್ದೇಶಕರು ಸಭೆಗೆ ಆಗಮಿಸಿ ಸ್ಪಷ್ಟ ವಿವರಣೆ ನೀಡಬೇಕು ಎಂದು ಒತ್ತಾಯಿಸಿದರು.
ಯೋಜನಾ ನಿರ್ದೇಶಕರು ತಕ್ಷಣ ಬರಲು ಅಸಾಧ್ಯ. ವಿಶೇಷ ಸಭೆ ಕರೆಯೋಣ ಎಂದು ಅಧ್ಯಕ್ಷ ರಾಮಕೃಷ್ಣ ಆಳ್ವ, ಉಪಾಧ್ಯಕ್ಷ ಮುಹಮ್ಮದ್ ನಂದರಬೆಟ್ಟು ತಿಳಿಸಿದರು.
ಧರಣಿ ನಡೆಸುವುದು ಬೇಡ ಎಂದು ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಮುಖ್ಯಾಧಿಕಾರಿ ಎಂ.ಎಚ್.ಸುಧಾಕರ್ ಸಹಿತ ಹಲವರು ಕೋರಿದರೂ ದೇವದಾಸ ಶೆಟ್ಟಿ ಸ್ಥಳದಿಂದ ಕದಲಲಿಲ್ಲ. ಬಿಜೆಪಿಯ ಇತರ ಎಲ್ಲ ಸದಸ್ಯರಾದ ಸುಗುಣಾ ಕಿಣಿ, ಗೋವಿಂದ ಪ್ರಭು, ಬಾಸ್ಕರ್, ಸಂಧ್ಯಾ ನಾಯ್ಕಾ ಇದ್ದರು.





