ಚಿಕ್ಕಮಗಳೂರು ನಗರಸಭೆ ವಿಶೇಷ ಸಭೆ: ವಿರೋಧದ ನಡುವೆಯೂ ಎಸ್‌ಎಫ್ ಸಿ, 14ನೇ ಹಣಕಾಸು ಯೋಜನೆಗೆ ಅನುಮೋದನೆ

ಚಿಕ್ಕಮಗಳೂರು, ಎ.27: ನಗರಸಭೆ ವಿಪಕ್ಷ ಸದಸ್ಯರ ವಿರೋಧದ ನಡುವೆಯೂ ಎಸ್.ಎಫ್.ಸಿ. ಮತ್ತು 14ನೇ ಹಣಕಾಸು ಯೋಜನೆಗೆ ಗುರುವಾರ ನಗರಸಭೆ ಅಧ್ಯಕ್ಷೆ ಕವಿತಾಶೇಖರ್ ಅಧ್ಯಕ್ಷತೆಯಲ್ಲಿ ನಡೆದ ವಿಶೇಷ ಸಭೆಯಲ್ಲಿ ಅನುಮೋದನೆ ದೊರೆಯಿತು.
ನಗರದ ಅಭಿವೃದ್ಧಿಗೆ ಸಂಬಂಧಿಸಿದಂತೆ ಎಸ್.ಎಫ್.ಸಿ. ಮತ್ತು 14 ನೇ ಹಣಕಾಸು ಯೋಜನೆ ಹಾಗೂ ನಗರೋತ್ಥಾನ ಯೋಜನೆಗಳಿಗೆ ಕ್ರಿಯಾ ಯೋಜನೆ ತಯಾರಿಸಿ ಜಿಲ್ಲಾಧಿಕಾರಿಗೆ ಸಲ್ಲಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಎಸ್.ಎಫ್.ಸಿ. ಮತ್ತು 14ನೇ ಹಣಕಾಸು ಯೋಜನೆ ತಯಾರಿಸಲು ವಿರೋಧ ಪಕ್ಷದ ಸದಸ್ಯರು ಒಪ್ಪಿಗೆ ನೀಡದೆ ವಿರೋಧ ವ್ಯಕ್ತ ಪಡಿಸಿದರೂ ನಗರಸಭೆ ಆಡಳಿತ ನಡೆಸುತ್ತಿರುವ ಬಿಜೆಪಿ ಬಹುಮತದ ಮೇರೆಗೆ ಒಪ್ಪಿಗೆ ಪಡೆಯಿತು.
ಸರಕಾರದಿಂದ ನಗರಸಭೆಗೆ ಬಿಡುಗಡೆಯಾದ ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡಿಲ್ಲ. ಬಿಜೆಪಿ ಸದಸ್ಯರ ವಾರ್ಡ್‌ಗಳಿಗೆ ಹೆಚ್ಚಿನ ಆಸಕ್ತಿ ತೋರಲಾಗುತ್ತಿದೆ ಎಂದು ವಿಪಕ್ಷ ಸದಸ್ಯ ಎಚ್.ಎಸ್. ಪುಟ್ಟಸ್ವಾಮಿ ವಿಷಯ ಪ್ರಸ್ತಾಪಿಸಿ, ಈ ಎರಡು ಯೋಜನೆಗಳಿಗೆ ಒಪ್ಪಿಗೆ ಕೊಡುವುದಿಲ್ಲ ಎಂದು ಪಟ್ಟು ಹಿಡಿದರು. ಕಾಮಗಾರಿಗಳ ಪಟ್ಟಿ ತಯಾರಿಸುವಾಗ ವಿಪಕ್ಷವನ್ನು ನಿರ್ಲಕ್ಷಿಸಿದ್ದಾರೆ ಎಂದಾಗ ಸದಸ್ಯರುಗಳಾದ ಸುರೇಖಾ ಸಂಪತ್ ರಾಜ್, ಲಕ್ಷ್ಮೀಶ್, ರೂಬಿನ್ ಮೋಸಸ್ ಬೆಂಬಲಿಸಿದರು.
ಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಸದಸ್ಯರು ಉದ್ದೇಶಪೂರ್ವಕವಾಗಿ ಕೂಗಾಡುತ್ತಿದ್ದಾರೆ. ಇದಕ್ಕೆ ಬೆಲೆ ಕೊಡಬೇಡಿ ಎಂದು ಬಿಜೆಪಿ ಸದಸ್ಯರುಗಳಾದ ಸುಧೀರ್, ಟಿ.ರಾಜಶೇಖರ್, ಎಚ್.ಡಿ. ತಮ್ಮಯ್ಯ, ಪುಷ್ಪರಾಜ್, ಲೀಲಾ, ಖುರೇಶಿ ಮತ್ತಿತರರು ಹೇಳಿದರು.
ನಗರೋತ್ಥಾನದ ಅನುದಾನವನ್ನು ಎಲ್ಲಾ ವಾರ್ಡ್‌ಗಳಿಗೆ ಸಮರ್ಪಕವಾಗಿ ಬಳಕೆ ಮಾಡಬೇಕು. ನಗರಸಭೆ ಬಿಜೆಪಿ ಆಡಳಿತದಲ್ಲಿ ವಿಪಕ್ಷ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ಎಂಬ ಆರೋಪ ಕೇಳಿಬಂತು. ನಗರೋತ್ಥಾನ ಯೋಜನೆಯ ಅನುದಾನ ಬಳಕೆ ಬಗ್ಗೆ ವಿರೋಧ ಪಕ್ಷದ ಸದಸ್ಯರು ಯಾವುದೇ ವಿರೋಧ ವ್ಯಕ್ತಪಡಿಸದೆ ಸಹಮತ ನೀಡಿದರು.
ಸಭೆಯಲ್ಲಿ ನಗರಸಭೆ ಉಪಾಧ್ಯಕ್ಷ ರವೀಂದ್ರನಾಥ, ಪ್ರಬಾರಿ ಆಯುಕ್ತರು ಮತ್ತಿತರ ಸದಸ್ಯರು ಉಪಸ್ಥಿತರಿದ್ದರು.







