ಪತಿಯನ್ನೇ ಕೊಲೆಗೈದ ಪತ್ನಿ, ಪ್ರಿಯಕರನಿಗೆ ಜೀವಾವಧಿ ಶಿಕ್ಷೆ

ಹಾಸನ, ಎ.27: ಪ್ರಿಯಕರನ ಜೊತೆಗೂಡಿ ಪತಿಯನ್ನೇ ಕೊಲೆಗೈದಿದ್ದ ಪತ್ನಿ ಹಾಗೂ ಪ್ರಿಯಕರನಿಗೆ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷೆನ್ಸ್ ನ್ಯಾಯಾಲಯ ಗುರುವಾರ ಜೀವಾವಧಿ ಶಿಕ್ಷೆ ಹಾಗೂ ಸಹಾಯ ಮಾಡಿದ ಓರ್ವನಿಗೆ 3 ವರ್ಷ ಜೈಲುವಾಸದ ಶಿಕ್ಷೆ ವಿಧಿಸಿ ತೀರ್ಪಿತ್ತಿದೆ.
ಮೂವರಿಗೂ ಮರಣದಂಡನೆ ವಿಧಿಸುವಂತೆ ಸರಕಾರದ ಪರ ವಕೀಲರು ವಾದ ಮಂಡಿಸಿದ್ದರು. ಆದರೆ ನ್ಯಾಯಾಧೀಶರು ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ.
2012ರ ಫೆಬ್ರವರಿ 16ರಂದು ಹಳೇಬೀಡು ಪೊಲೀಸ್ ಠಾಣೆ ವ್ಯಾಪ್ತಿಯ ದ್ಯಾವಪ್ಪನಹಳ್ಳಿಯಲ್ಲಿ ರಾಧಾ ಎಂಬಾಕೆ ತನ್ನ ಪ್ರಿಯಕರ ಹರೀಶ್ ಮತ್ತು ಆತನ ಸ್ನೇಹಿತ ಲೋಕೇಶ್ ಜೊತೆ ಸೇರಿ ಗಂಡ ಕುಮಾರ್‌ನನ್ನು ಕೊಲೆ ಮಾಡಿಸಿ, ಶವವನ್ನು ತೋಟದಲ್ಲಿ ಹೂತಿದ್ದಳು. ನಂತರ ಕೊಲೆಯ ಸುಳಿವು ಸಿಗದಂತೆ ಆರೋಪಿಯ ಜಮೀನಿನಲ್ಲೇ ಜೆಸಿಬಿ ಮೂಲಕ ಗುಂಡಿ ತೆಗೆಸಿ ಶವವನ್ನು ಹೂತು, ಮಾರನೇ ದಿನದಿಂದ ಗಂಡ ಕಾಣೆಯಾಗಿದ್ದಾನೆ ಎಂದಿದ್ದಳು.
ನಂತರ ತನಿಖೆ ಆರಂಭಿಸಿದ ಹಳೇಬೀಡು ಪೊಲೀಸರು ರಾಧಾಳ ಫೋನನ್ನು ಜಾಲಾಡಿದಾಗ ಆಕೆ ಅದೇ ಊರಿನ ಹರೀಶ್ ಎಂಬಾತನೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದುದು ಬಹಿರಂಗವಾಗಿತ್ತು. ನಂತರ ಪೊಲೀಸರು ಹರೀಶನನ್ನು ಪೊಲೀಸ್ ಠಾಣೆಗೆ ಕರೆತಂದು ವಿಚಾರಣೆ ನಡೆಸಿದಾಗ ಕುಮಾರನ ಕೊಲೆ ರಹಸ್ಯ ಬಯಲಾಯಿತು. ರಾಧಾ ಮತ್ತು ಹರೀಶ್ ನಡುವಿನ ಅಕ್ರಮ ಸಂಬಂಧಕ್ಕೆ ಕುಮಾರ್ ಬಲಿಯಾಗಿರುವುದು ಖಾತ್ರಿಯಾಗಿತ್ತು. ಬಳಿಕ ಪೊಲೀಸರು, ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದರು. ಕೋರ್ಟ್ ವಿಚಾರಣೆ ಪೂರ್ಣಗೊಳಿಸಿದ್ದು, ಮೂವರು ಆರೋಪಿಗಳಲ್ಲಿ ರಾಧಾ ಮತ್ತು ಹರೀಶನಿಗೆ ಜೀವಾವಧಿ ಶಿಕ್ಷೆ, 3.50 ಲಕ್ಷ ರೂ. ದಂಡ ವಿಧಿಸಲಾಗಿದೆ. ಮತ್ತೊಬ್ಬ ಆರೋಪಿ ಲೋಕೇಶನಿಗೆ 3 ವರ್ಷ ಕಠಿಣ ಶಿಕ್ಷೆ ವಿಧಿಸಲಾಗಿದೆ.
ಕೊಲೆ ಪ್ರಕರಣದಿಂದಾಗಿ ಮಕ್ಕಳು ಅನಾಥವಾಗಿದ್ದ ಹಿನ್ನೆಲೆಯಲ್ಲಿ ನ್ಯಾಯಾಲಯವು ಮಾನವೀಯತೆಯಿಂದ ಅವರ ಜೀವನಾಂಶಕ್ಕಾಗಿ ಹರೀಶ 3.50 ಲಕ್ಷ ರೂ. ಗಳನ್ನು ದಂಡ ಕಟ್ಟುವಂತೆ ಆದೇಶಿಸಿದೆ. ರಾಧಾ ತನ್ನ ಗಂಡನನ್ನು ಕೊಲೆ ಮಾಡಿ ಜೈಲುಪಾಲಾಗಿರುವುದರಿಂದ ಇದೀಗ ಮಕ್ಕಳು ಇತ್ತ ಅಪ್ಪನೂ ಇಲ್ಲ, ಅತ್ತ ಅಮ್ಮನೂ ಇಲ್ಲ ಎಂಬಂತಹ ಸ್ಥಿತಿಯಲ್ಲಿದ್ದಾರೆ. ಹಾಗಾಗಿ ಅವರ ಮುಂದಿನ ವಿಷ್ಯಕ್ಕೆ, ವ್ಯಾಸಂಗಕ್ಕಾಗಿ ನ್ಯಾಯಾಲಯವು ಆರೋಪಿಗಳಿಗೆ ಒಟ್ಟು 3.50 ಲಕ್ಷ ರೂ. ದಂಡ ವಿಧಿಸಿದ್ದು, ಅಷ್ಟೂ ಹಣವನ್ನು ಮಕ್ಕಳಿಗೆ ನೀಡಬೇಕೆಂದು ತನ್ನ ತೀರ್ಪಿನಲ್ಲಿ ಉಲ್ಲೇಖಿಸಿದೆ.







