ಗುಜರಾತ್ ‘ಲಯನ್ಸ್’ ಗರ್ಜನೆಗೆ ಆರ್‌ಸಿಬಿ ತತ್ತರ

ಬೆಂಗಳೂರು, ಎ.27: ಫಿಂಚ್(72 ರನ್) ಹಾಗೂ ನಾಯಕ ಸುರೇಶ್ ರೈನಾ(ಅಜೇಯ 34)ಮೂರನೆ ವಿಕೆಟ್‌ಗೆ ಸೇರಿಸಿದ 92 ರನ್ ಜೊತೆಯಾಟದ ನೆರವಿನಿಂದ ಗುಜರಾತ್ ಲಯನ್ಸ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ವಿರುದ್ಧದ ಐಪಿಎಲ್ ಪಂದ್ಯವನ್ನು 7 ವಿಕೆಟ್‌ಗಳ ಅಂತರದಿಂದ ಗೆದ್ದುಕೊಂಡಿದೆ.
ಇಲ್ಲಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಐಪಿಎಲ್‌ನ 31ನೆ ಪಂದ್ಯದ ಗೆಲುವಿಗೆ 135 ರನ್ ಸುಲಭ ಗುರಿ ಪಡೆದಿದ್ದ ಗುಜರಾತ್ ತಂಡ 13.5 ಓವರ್‌ಗಳಲ್ಲಿ 3 ವಿಕೆಟ್‌ಗಳ ನಷ್ಟಕ್ಕೆ 135 ರನ್ ಗಳಿಸಿ ಜಯಭೇರಿ ಬಾರಿಸಿತು. ಫಿಂಚ್(72ರನ್, 34 ಎಸೆತ, 5 ಬೌಂಡರಿ, 6 ಸಿಕ್ಸರ್) ಹಾಗೂ ರೈನಾ(ಅಜೇಯ 34, 30 ಎಸೆತ, 4 ಬೌಂಡರಿ, 1 ಸಿಕ್ಸರ್)ಅಮೋಘ ಬ್ಯಾಟಿಂಗ್ ಪ್ರದರ್ಶಿಸಿ ತಂಡಕ್ಕೆ ಆಸರೆಯಾದರು.
ಫಿಂಚ್ ಔಟಾದ ಬಳಿಕ ರವೀಂದ್ರ ಜಡೇಜರೊಂದಿಗೆ 4ನೆ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 22ರನ್ ಸೇರಿಸಿದ ರೈನಾ ಇನ್ನೂ 37 ಎಸೆತಗಳು ಬಾಕಿ ಇರುವಾಗಲೇ ತಂಡಕ್ಕೆ ಗೆಲುವು ತಂದರು.
ಇದಕ್ಕೆ ಮೊದಲು ಬ್ಯಾಟಿಂಗ್ ಮಾಡಿದ್ದ ಆರ್‌ಸಿಬಿಯನ್ನು ಕೇವಲ 134 ರನ್‌ಗೆ ಕಟ್ಟಿಹಾಕಲು ನೆರವಾದ ಆ್ಯಂಡ್ರೂ ಟೈ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.
ಆರ್‌ಸಿಬಿ 134 ರನ್‌ಗೆ ಆಲೌಟ್: ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಆರ್‌ಸಿಬಿ ತಂಡ ಲಯನ್ಸ್‌ನ ವೇಗದ ಬೌಲರ್ ಆ್ಯಂಡ್ರೂ ಟೈ (3-12)ಹಾಗೂ ಸ್ಪಿನ್ನರ್ ರವೀಂದ್ರ ಜಡೇಜ(2-28) ಸಂಘಟಿಸಿದ್ದ ಶಿಸ್ತುಬದ್ಧ ಬೌಲಿಂಗ್ ದಾಳಿಗೆ ತತ್ತರಿಸಿ ನಿಗದಿತ 20 ಓವರ್‌ಗಳಲ್ಲಿ 134 ರನ್ ಗಳಿಸಿ ಆಲೌಟಾಯಿತು.
ಕ್ರಿಸ್ ಗೇಲ್‌ರೊಂದಿಗೆ ಇನಿಂಗ್ಸ್ ಆರಂಭಿಸಿದ ವಿರಾಟ್ ಕೊಹ್ಲಿ 10 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಕೊಹ್ಲಿ ಔಟಾದ ಬೆನ್ನಿಗೆ ಗೇಲ್ (8)ವಿಕೆಟ್ ಒಪ್ಪಿಸಿದರು. ಹೆಡ್(0) ಖಾತೆ ತೆರೆಯದೇ ಪೆವಿಲಿಯನ್ ಸೇರಿದರು. ಎಬಿಡಿ ವಿಲಿಯರ್ಸ್ ಕೇವಲ 5 ರನ್ ಗಳಿಸಿ ರನೌಟಾದರು. 31 ರನ್ ಗಳಿಸಿ ತಂಡಕ್ಕೆ ಆಸರೆಯಾಗುವ ಭರವಸೆ ಮೂಡಿಸಿದ್ದ ಕೇದಾರ್ ಜಾಧವ್‌ಗೆ ಜಡೇಜ ಪೆವಿಲಿಯನ್ ಹಾದಿ ತೋರಿಸಿದರು. ಆಗ ಆರ್‌ಸಿಬಿ 60 ರನ್‌ಗೆ 5 ವಿಕೆಟ್‌ಗಳನ್ನು ಕಳೆದುಕೊಂಡಿತ್ತು.
ನೇಗಿ ಹಾಗೂ ಮನ್‌ದೀಪ್ 6ನೆ ವಿಕೆಟ್‌ಗೆ 40 ರನ್ ಸೇರಿಸಿ ಇನಿಂಗ್ಸ್ ರಿಪೇರಿಗೆ ಯತ್ನಿಸಿದರು. ಮನ್‌ದೀಪ್(8) ವಿಕೆಟ್ ಕಬಳಿಸಿದ ಟೈ ಈ ಜೋಡಿಯನ್ನು ಬೇರ್ಪಡಿಸಿದರು.
ಆರ್‌ಸಿಬಿ ಪರ ಪವನ್ ನೇಗಿ(32) ಅಗ್ರ ಸ್ಕೋರರ್ ಎನಿಸಿಕೊಂಡರು. ಲಯನ್ಸ್ ಪರವಾಗಿ ಥಾಂಪಿ(1-34), ಸೋನಿ(1-28), ಹಾಗೂ ಫಾಕ್ನರ್(1-15) ತಲಾ ಒಂದು ವಿಕೆಟ್ ಪಡೆದರು.
ಸಂಕ್ಷಿಪ್ತ ಸ್ಕೋರ್
ರಾಯಲ್ ಚಾಲೆಂಜರ್ಸ್ ಬೆಂಗಳೂರು: 20 ಓವರ್‌ಗಳಲ್ಲಿ 134 ರನ್‌ಗೆ ಆಲೌಟ್
(ನೇಗಿ 32, ಜಾಧವ್ 31, ಆ್ಯಂಡ್ರೂ ಟೈ 3-12, ಜಡೇಜ 2-28)
ಗುಜರಾತ್ ಲಯನ್ಸ್: 13.5 ಓವರ್‌ಗಳಲ್ಲಿ 135/3
(ಫಿಂಚ್ 72, ರೈನಾ ಅಜೇಯ 34, ಬದ್ರೀ 2-29)







