ಇಂದು ಡೆಲ್ಲಿ ಡೆವಿಲ್ಸ್‌ಗೆ ಕೋಲ್ಕತಾ ಕಠಿಣ ಸವಾಲು

ಕೋಲ್ಕತಾ, ಎ.27: ಹತ್ತನೆ ಆವೃತ್ತಿಯ ಐಪಿಎಲ್‌ನಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಹಾಗೂ ಡೆಲ್ಲಿ ಡೇರ್ ಡೆವಿಲ್ಸ್ ತಂಡಗಳು ಶುಕ್ರವಾರ ಎರಡನೆ ಬಾರಿ ಮುಖಾಮುಖಿಯಾಗುತ್ತಿವೆ. ಗೌತಮ್ ಗಂಭೀರ್ ತನ್ನ ತವರುಪಟ್ಟಣದ ತಂಡವನ್ನು ಮಣಿಸಲು ಎದುರು ನೋಡುತ್ತಿದ್ದಾರೆ.
ಕೆಕೆಆರ್ ತಂಡ ಡೆಲ್ಲಿ ವಿರುದ್ಧ ಈ ಮೊದಲು ಆಡಿದ್ದ ಪಂದ್ಯವನ್ನು 4 ವಿಕೆಟ್‌ಗಳಿಂದ ಗೆದ್ದುಕೊಂಡಿದೆ. ಶುಕ್ರವಾರ ತನ್ನ ತವರು ಮೈದಾನ ಈಡನ್‌ಗಾರ್ಡನ್ಸ್ ಸ್ಟೇಡಿಯಂನಲ್ಲಿ ನಡೆಯಲಿರುವ ಪಂದ್ಯದಲ್ಲಿ ಕೋಲ್ಕತಾವೇ ಪಂದ್ಯ ಗೆಲ್ಲುವ ಫೇವರಿಟ್ ತಂಡವಾಗಿದೆ.
ಆರ್‌ಸಿಬಿ ಹಾಗೂ ರೈಸಿಂಗ್ ಪುಣೆ ಸೂಪರ್‌ಕಿಂಗ್ಸ್ ವಿರುದ್ಧ ಭರ್ಜರಿ ಜಯ ಸಾಧಿಸಿರುವ ಕೆಕೆಆರ್ ಪ್ರಸ್ತುತ ಅಮೋಘ ಫಾರ್ಮ್‌ನಲ್ಲಿದೆ.
8 ಪಂದ್ಯಗಳಲ್ಲಿ 12 ಅಂಕ ಗಳಿಸಿರುವ ಕೆಕೆಆರ್ +1.153 ನೆಟ್ ರನ್‌ರೇಟ್ ಹೊಂದಿದೆ. ಮತ್ತೊಂದೆಡೆ ಮುಂಬೈ ಇಂಡಿಯನ್ಸ್ ತಂಡ +0.514 ರನ್‌ರೇಟ್ ಕಾಯ್ದುಕೊಂಡು ಕೆಕೆಆರ್‌ಗೆ ಪೈಪೋಟಿ ನೀಡುತ್ತಿದೆ.
ಡೆಲ್ಲಿ ತಂಡ ಆರು ಪಂದ್ಯಗಳಲ್ಲಿ ಕೇವಲ ನಾಲ್ಕು ಅಂಕಗಳಿಸಿದ್ದು, ಅಂಕಪಟ್ಟಿಯಲ್ಲಿ ಏಳನೆ ಸ್ಥಾನದಲ್ಲಿದೆ. ಹ್ಯಾಟ್ರಿಕ್ ಸೋಲಿನ ಬಳಿಕ ಆರು ದಿನಗಳ ಕಾಲ ಬಿಡುವು ಪಡೆದುಕೊಂಡಿರುವ ಡೆಲ್ಲಿ ತಂಡ ನಾಯಕ-ಸಲಹೆಗಾರ ಝಹೀರ್ ಖಾನ್ ಹಾಗೂ ಕೋಚ್ ರಾಹುಲ್ ದ್ರಾವಿಡ್ ಮಾರ್ಗದರ್ಶನದಲ್ಲಿ ಗೆಲುವಿನ ಹಾದಿಗೆ ಮರಳುವ ವಿಶ್ವಾಸದಲ್ಲಿದೆ.
ಡೆಲ್ಲಿ ತಂಡದ ವೇಗದ ಬೌಲಿಂಗ್ ವಿಭಾಗದಲ್ಲಿ ಪ್ಯಾಟ್ ಕಮಿನ್ಸ್, ಕ್ರಿಸ್ ಮೊರಿಸ್ ಹಾಗೂ ಕಾಗಿಸೊ ರಬಾಡ ಅವರಿದ್ದಾರೆ. ಗಂಭೀರ್ ಹಾಗೂ ಸುನೀಲ್ ನರೇನ್ ಅವರನ್ನೊಳಗೊಂಡ ಕೆಕೆಆರ್ ಬ್ಯಾಟಿಂಗ್ ಸರದಿಯನ್ನು ಎದುರಿಸುವ ಶಕ್ತಿ ಈ ಬೌಲಿಂಗ್ ಪಡೆಗಿದೆ.
ಕ್ರಿಸ್ ಲಿನ್ ಗಾಯಗೊಂಡಿದ್ದ ಹಿನ್ನೆಲೆಯಲ್ಲಿ ಇನಿಂಗ್ಸ್ ಆರಂಭಿಸುವ ಅವಕಾಶ ಪಡೆದಿದ್ದ ಸುನೀಲ್ ನರೇನ್ 182.66ರ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟಿಂಗ್ ಮಾಡಿ ಅನಿರೀಕ್ಷಿತ ಯಶಸ್ಸು ಸಾಧಿಸಿದ್ದಾರೆ. ಕೆಕೆಆರ್‌ನ ಗೆಲುವಿನ ಓಟದಲ್ಲಿ ನರೇನ್ ಪ್ರಮುಖ ಪಾತ್ರವಹಿಸಿದ್ದಾರೆ.
ಸನ್‌ರೈಸರ್ಸ್ ವಿರುದ್ಧ ಪಂಜಾಬ್‌ಗೆ ಸೇಡಿನ ಪಂದ್ಯ
ಮೊಹಾಲಿ, ಎ.27: ಸೇಡು ತೀರಿಸಿಕೊಳ್ಳುವ ಉದ್ದೇಶದೊಂದಿಗೆ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಶುಕ್ರವಾರ ತನ್ನ ತವರು ಮೈದಾನದಲ್ಲಿ ನಡೆಯಲಿರುವ ಐಪಿಎಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಲಿದೆ.
10ನೆ ಆವೃತ್ತಿಯ ಐಪಿಎಲ್‌ನಲ್ಲಿ ಮೊದಲೆರಡು ಪಂದ್ಯಗಳನ್ನು ಜಯಿಸಿದ್ದ ಪಂಜಾಬ್ ತಂಡ ಮುಂದಿನ ಸುತ್ತಿಗೇರುವ ಪ್ರಬಲ ತಂಡವಾಗುವ ಭರವಸೆ ಮೂಡಿಸಿತ್ತು. ಇದೀಗ ಐಪಿಎಲ್‌ನ ಅರ್ಧಾಂಶ ಸ್ಪರ್ಧೆಗಳು ಕೊನೆಗೊಂಡಿದ್ದು, ಕೆಕೆಆರ್ ಹಾಗೂ ಮುಂಬೈ ತಂಡಗಳಂತೆ ಪ್ಲೇ-ಆಫ್ ಸ್ಥಾನಕ್ಕೇರಲು ಪೈಪೋಟಿ ನಡೆಸುತ್ತಿದೆ.
ಸನ್‌ರೈಸರ್ಸ್ ತಂಡ ಸಮತೋಲಿತ ತಂಡವಾಗಿದೆ. ಬೌಲಿಂಗ್ ವಿಭಾಗದಲ್ಲಿ ಭುವನೇಶ್ವರ ಕುಮಾರ್ ಸ್ಟಾರ್ ಬೌಲರ್ ಆಗಿದ್ದು, ಒಟ್ಟು 16 ವಿಕೆಟ್‌ಗಳನ್ನು ಪಡೆದಿದ್ದಾರೆ. ರಶೀದ್ ಖಾನ್ 10, ಹಿರಿಯ ಆಟಗಾರ ಆಶೀಷ್ ನೆಹ್ರಾ 5 ವಿಕೆಟ್‌ಗಳನ್ನು ಪಡೆದಿದ್ದಾರೆ. ಸನ್‌ರೈಸರ್ಸ್‌ನ ಬ್ಯಾಟಿಂಗ್ ವಿಭಾಗ ಈವರೆಗೆ ತನ್ನ ಸಾಮರ್ಥ್ಯದಷ್ಟು ಪ್ರದರ್ಶನ ನೀಡಿಲ್ಲ. ನಾಯಕ ಡೇವಿಡ್ ವಾರ್ನರ್(282 ವಿಕೆಟ್), ಸಹ ಆರಂಭಿಕ ಆಟಗಾರ ಶಿಖರ್ ಧವನ್(235) ಹಾಗೂ ಮೊಸೆಸ್ ಹೆನ್ರಿಕ್ಸ್(193) ಗಮನಾರ್ಹ ಪ್ರದರ್ಶನ ನೀಡಿದ್ದಾರೆ. ಆದರೆ, ಯುವರಾಜ್ ಸಿಂಗ್ ಫಾರ್ಮ್ ಕಳವಳಕಾರಿಯಾಗಿದೆ. ಕೇನ್ ವಿಲಿಯಮ್ಸನ್ ಉತ್ತಮ ಟಚ್‌ನಲ್ಲಿದ್ದಾರೆ. ದೀಪಕ್ ಹೂಡಾ ಈವರೆಗೆ ದೊಡ್ಡ ಹೊಡೆತ ಬಾರಿಸಿಲ್ಲ.
ತವರು ಸ್ಟೇಡಿಯಂನಲ್ಲಿ ಆಡುತ್ತಿರುವ ಪಂಜಾಬ್ ತಂಡ ಸತತ ನಾಲ್ಕು ಪಂದ್ಯಗಳಲ್ಲಿ ಸೋತ ಬಳಿಕ ಗುಜರಾತ್ ವಿರುದ್ಧ ಜಯ ಸಾಧಿಸಿತ್ತು. ಪಂಜಾಬ್ ಬೌಲಿಂಗ್ ವಿಭಾಗ ದುರ್ಬಲವಾಗಿದೆ. ಆರಂಭಿಕ ಆಟಗಾರ ಹಾಶಿಮ್‌ಅಮ್ಲ ಭರ್ಜರಿ ಫಾರ್ಮ್‌ನಲ್ಲಿದ್ದು 299 ರನ್ ಗಳಿಸಿದ್ದಾರೆ. ನಾಯಕ ಗ್ಲೆನ್ ಮ್ಯಾಕ್ಸ್‌ವೆಲ್(193) ಹಾಗೂ ಮನನ್ ವೋರಾ(176) ಸ್ಫೋಟಕ ಬ್ಯಾಟಿಂಗ್ ಮಾಡಿಲ್ಲ. ಶಾನ್ ಮಾರ್ಷ್, ಡೇವಿಡ್ ಮಿಲ್ಲರ್, ಇಯಾನ್ ಮೊರ್ಗನ್ ಹಾಗೂ ವೃದ್ದಿಮಾನ್ ಸಹಾ ತಂಡಕ್ಕೆ ಗೆಲುವು ತಂದುಕೊಡಬಲ್ಲ ಇನಿಂಗ್ಸ್ ಆಡಿಲ್ಲ. ಪಂಜಾಬ್ ಬ್ಯಾಟ್ಸ್‌ಮನ್‌ಗಳು ಸನ್‌ರೈಸರ್ಸ್‌ನ ಬೌಲರ್‌ಗಳನ್ನು ಹೇಗೆ ಎದುರಿಸುತ್ತಾರೆಂಬ ಕುತೂಹಲವಿದೆ. 10 ದಿನಗಳ ಹಿಂದೆ ನಡೆದಿದ್ದ ಪಂದ್ಯದಲ್ಲಿ ಗೆಲುವಿಗೆ 159 ರನ್ ಗುರಿ ಪಡೆದಿದ್ದ ಪಂಜಾಬ್ ತಂಡ 154 ರನ್ ಗಳಿಸಿ ಸೋಲೊಪ್ಪಿಕೊಂಡಿತ್ತು. ಈಗ ಮತ್ತೊಮ್ಮೆ ಉಭಯ ತಂಡಗಳಿಂದ ರೋಚಕ ಗೆಲುವು ನಿರೀಕ್ಷಿಸಲಾಗುತ್ತಿದೆ.
ಇಂದಿನ ಪಂದ್ಯಗಳು
ಕೋಲ್ಕತಾ ನೈಟ್ ರೈಡರ್ಸ್-ಡೆಲ್ಲಿ ಡೇರ್ ಡೆವಿಲ್ಸ್
ಸಮಯ: ಸಂಜೆ 4:00, ಸ್ಥಳ: ಕೋಲ್ಕತಾ.
ಕಿಂಗ್ಸ್ ಇಲೆವೆನ್ ಪಂಜಾಬ್-ಸನ್‌ರೈಸರ್ಸ್ ಹೈದರಾಬಾದ್
ಸಮಯ: ರಾತ್ರಿ 8:00, ಸ್ಥಳ: ಮೊಹಾಲಿ.







