ಭ್ರೂಣ ಲಿಂಗ ಪತ್ತೆ ನಿಷೇಧ ಕಾಯ್ದೆ ಕುರಿತ ಕಾರ್ಯಾಗಾರ

ಉಡುಪಿ, ಎ.27: ಪ್ರಸವ ಪೂರ್ವ ಭ್ರೂಣ ಲಿಂಗ ಪತ್ತೆ ನಿಷೇಧ ಕಾಯ್ದೆ- 1994ರ ಕುರಿತಂತೆ ಉಡುಪಿ ತಾಲೂಕು ಮಟ್ಟದ ಕಾರ್ಯಾಗಾರವು ಇತ್ತೀಚೆಗೆ ತಾಪಂ ಸಭಾಂಗಣದಲ್ಲಿ ನಡೆಯಿತು.
ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಪ್ರಾಧಿಕಾರ ಉಡುಪಿ ಇದರ ಸದಸ್ಯ ಕಾರ್ಯದರ್ಶಿ ಲತಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಗರ್ಭಪೂರ್ವ ಪ್ರಸವ ಪೂರ್ವ ಭ್ರೂಣ ಲಿಂಗ ಪತ್ತೆ ನಿಷೇಧ ಕಾಯ್ದೆಯಂತೆ ಭ್ರೂಣ ಲಿಂಗ ಪತ್ತೆ ಮಾಡುವವರಿಗೆ ಆಗುವ ಶಿಕ್ಷೆಯ ಪ್ರಮಾಣ ದಂಡದ ಪ್ರಮಾಣಗಳ ಕುರಿತು ವಿವರಿಸಿದರು.
ಉಡುಪಿ ಜಿಲ್ಲೆಯಲ್ಲಿ 5 ವರ್ಷದೊಳಗಿನ ಮಕ್ಕಳಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ಗಣನೀಯವಾಗಿ ಕುಸಿಯುತ್ತಿರುವುದು ಕಳವಳಕರಸಂಗತಿಯಾಗಿದ್ದು, ಕಾನೂನಿನ ಜೊತೆಗೆ ನಾಗರಿಕ ಸಮಾಜ ಕೂಡ ಈ ಬಗ್ಗೆ ಗಂಭೀರವಾಗಿ ಚಿಂತನೆ ಮಾಡಬೇಕಾಗಿದೆ ಎಂದು ಲತಾ ತಿಳಿಸಿದರು.
ಮಹಿಳಾ ಪೊಲೀಸ್ ಠಾಣೆಯ ಎಎಸ್‌ಐ ಮುಕ್ತಾಬಾಯಿ ಇವರು, ಹೆಣ್ಣು ಮಕ್ಕಳ ರಕ್ಷಣೆ, ಹೆಣ್ಣು ಮಕ್ಕಳಿಗೆ ಆಗುವ ತೊಂದರೆಗಳು, ಲೈಂಗಿಕ ಕಿರುಕುಳ, ಹೆಣ್ಣು ಮಕ್ಕಳ ರಕ್ಷಣೆಗೆ ಇರುವ ಸೌಲಭ್ಯಗಳು ಕುರಿತು ವಿವರಿಸಿದರು.
ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಮರಾವ್ ಮಾತನಾಡಿ, ಗರ್ಭಪೂರ್ವ ಪ್ರಸವ ಪೂರ್ವ ಭ್ರೂಣ ಲಿಂಗ ಪತ್ತೆ ಮಾಡಿದವರಿಗೆ, ಮಾಡಿಸಿಕೊಂಡವರಿಗೆ ಮತ್ತು ಮಾಡಲು ಪ್ರಚೋದನೆ ನೀಡಿದವರಿಗೆ ಆಗುವ ಶಿಕ್ಷೆಗಳ ಕುರಿತು ವಿವರಿಸಿದರು.
ಶಿಶು ಅಭಿವೃದ್ಧಿ ಅಧಿಕಾರಿ ವೀಣಾ ವಿವೇಕಾನಂದ ಶಿಶು ಅಭಿವೃದ್ಧಿ ಇಲಾಖೆ ಯಲ್ಲಿ ಮಹಿಳೆಯರಿಗೆ ಸಿಗುವ ಸೇವಾ ಸೌಲ್ಯಗಳ ಕುರಿತು ಮಾಹಿತಿ ನೀಡಿ ಹೆಣ್ಣು ಮಕ್ಕಳ ರಕ್ಷಣೆ ಜವಾಬ್ದಾರಿಗಳ ಬಗ್ಗೆ ವಿವರಿಸಿದರು. ಅದ್ಯಕ್ಷತೆಯನ್ನು ಉಡುಪಿ ತಾಪಂ ಅದ್ಯಕ್ಷೆ ನಳಿನಿ ಪ್ರದೀಪ್ ರಾವ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ತಾಪಂ ಉಪಾಧ್ಯಕ್ಷ ರಾಜೇಂದ್ರ ಪಂದುಬೆಟ್ಟು ಉಪಸ್ಥಿತರಿದ್ದರು.
ತಾಲೂಕು ಆರೋಗ್ಯಾಧಿಕಾರಿ ಡಾ.ನಾಗರತ್ನ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತಾಡಿದರು. ಹಿರಿಯ ಆರೋಗ್ಯ ಸಹಾಯಕ ದೇವಪ್ಪ ಪಟಗಾರ ಕಾರ್ಯಕ್ರಮ ನಿರೂಪಿಸಿ ತಾಲೂಕು ಆಶಾ ಸಂಯೋಜಕಿ ಶಿಲ್ಪವಂದಿಸಿದರು.







