ಎಐಎಡಿಎಂಕೆ ಪಕ್ಷದ ಚಿಹ್ನೆಗಾಗಿ ಲಂಚ ನೀಡಿದ ಪ್ರಕರಣ:ಹವಾಲ ಏಜೆಂಟ್ ನರೇಶ್ ಬಂಧನ

ಹೊಸದಿಲ್ಲಿ, ಎ.28: ತಮಿಳುನಾಡಿನ ಆಡಳಿತರೂಢ ಎಐಎಡಿಎಂಕೆ ಪಕ್ಷದ ಚಿಹ್ನೆ ಎರಡು ಎಲೆಯನ್ನು ತನ್ನ ವಶಕ್ಕೆ ಪಡೆಯುವ ಉದ್ದೇಶದಿಂದ ಚುನಾವಣಾ ಆಯೋಗದ ಅಧಿಕಾರಿಗಳಿಗೆ ಕೋಟ್ಯಂತರ ರೂ. ಲಂಚ ನೀಡಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಹವಾಲ ಏಜೆಂಟ್ ನರೇಶ್ ಎಂಬಾತನನ್ನು ದಿಲ್ಲಿ ಪೊಲೀಸರು ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಬಂಧಿಸಿದ್ದಾರೆ.
ಇನ್ನೊಬ್ಬ ವ್ಯಕ್ತಿಯ ಬಂಧನಕ್ಕಾಗಿ ಬಲೆ ಬೀಸಲಾಗಿದ್ದು, ಆತನನ್ನು ಥಾಯ್ಲೆಂಡ್‌ನಿಂದ ಕರೆತರಬೇಕಾಗಿದೆ. ನರೇಶ್ ಮಧ್ಯವರ್ತಿ ಸುಖೇಶ್ ಚಂದ್ರಶೇಖರ್‌ಗೆ ಹಣ ಪೂರೈಸಿದ ಆರೋಪ ಎದುರಿಸುತ್ತಿದ್ದಾನೆ.
ಎಐಎಡಿಎಂಕೆ ನಾಯಕಿ ಶಶಿಕಲಾರ ಸಂಬಂಧಿ ದಿನಕರನ್ ಮಾಜಿ ಮುಖ್ಯಮಂತ್ರಿ ಜಯಲಲಿತಾರ ನಿಧನದಿಂದಾಗಿ ತೆರವಾಗಿದ್ದ ಆರ್.ಕೆ. ನಗರ ಉಪ ಚುನಾವಣೆಯಲ್ಲಿ ಪಕ್ಷದ ಅಧಿಕೃತ ಚಿಹ್ನೆಯನ್ನು ತನ್ನದಾಗಿಸಿಕೊಳ್ಳಲು ದಿಲ್ಲಿಯ ಏಜೆಂಟ್‌ನ ಮೂಲಕ ಚುನಾವಣಾ ಆಯೋಗದ ಅಧಿಕಾರಿಗಳಿಗೆ 50 ಕೋ. ರೂ. ಲಂಚ ನೀಡಲು ಯತ್ನಿಸಿದ ಆರೋಪ ಎದುರಿಸುತ್ತಿದ್ದು, ಈ ಕೇಸ್‌ಗೆ ಸಂಬಂಧಿಸಿ ದಿಲ್ಲಿ ಪೊಲೀಸರು ನಾಲ್ಕು ದಿನಗಳ ಕಾಲ ದಿನಕರನ್‌ರನ್ನು ವಿಚಾರಣೆ ನಡೆಸಿದ್ದು, ಮಂಗಳವಾರ ರಾತ್ರಿ ಬಂಧಿಸಿದ್ದಾರೆ.
ಚುನಾವಣಾ ಆಯೋಗಕ್ಕೆ ಲಂಚ ನೀಡಿರುವ ಪ್ರಕರಣದ ತನಿಖೆ ನಡೆಸುತ್ತಿರುವ ದಿಲ್ಲಿ ಪೊಲೀಸ್ ತಂಡ ದಿನಕರನ್ ಹಾಗೂ ಅವರ ಸ್ನೇಹಿತ ಮಲ್ಲಿಕಾರ್ಜುನ ಎಂಬಾತನನ್ನು ದಿಲ್ಲಿಯಿಂದ ಚೆನ್ನೈಗೆ ವಿಮಾನದ ಮೂಲಕ ಕರೆದೊಯ್ದಿದ್ದಾರೆ.
ದಿಲ್ಲಿ ಪೊಲೀಸರು ಏಜೆಂಟ್ ಸುಖೇಶ್ ಚಂದ್ರಶೇಖರ್ ಹಾಗೂ ಆರೋಪಿ ದಿನಕರನ್‌ರನ್ನು ತೀವ್ರ ವಿಚಾರಣೆ ನಡೆಸುತ್ತಿದ್ದು, ಈ ಇಬ್ಬರ ನಡುವೆ ಬ್ಯಾಂಕ್ ಮಾತ್ರವಲ್ಲ ಹವಾಲದ ಮೂಲಕ ವ್ಯವಹಾರ ನಡೆದಿದೆ ಎನ್ನಲಾಗಿದೆ. ಈ ಸಂಬಂಧ ಹವಾಲ ಏಜೆಂಟ್‌ನನ್ನು ದಿಲ್ಲಿ ಪೊಲೀಸರು ಇಂದು ಬಂಧಿಸಿದ್ದಾರೆ.