ವಿದ್ಯಾರ್ಥಿಗಳು ಆದಿತ್ಯನಾಥ್ ಶೈಲಿಯ ಹೇರ್ ಕಟ್ ಮಾಡುವಂತೆ ಆದೇಶಿಸಿದ ಮೀರತ್ ನ ಖಾಸಗಿ ಶಾಲೆ
ಮಾಂಸಾಹಾರ ಸೇವನೆ, ಗಡ್ಡ ಬಿಡುವುದಕ್ಕೂ ನಿರ್ಬಂಧ

ಮೀರತ್, ಎ.28: ಸಿಬಿಎಸ್‌ಇ ಶಿಕ್ಷಣ ನೀಡುವ ಖಾಸಗಿ ಶಾಲೆಯೊಂದು ವಿಚಿತ್ರ ನಿಯಮವೊಂದನ್ನು ಜಾರಿಗೆ ತಂದು ಇದೀಗ ಸುದ್ದಿಯಲ್ಲಿದೆ. ಶಾಲೆಯಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗೆ ಕಲಿಯುತ್ತಿರುವ ಸುಮಾರು 2,800 ವಿದ್ಯಾರ್ಥಿಗಳಿಗೆ ಮುಖ್ಯಮಂತ್ರಿ ಆದಿತ್ಯನಾಥ್ ಮಾದರಿಯ ಹೇರ್ ಸ್ಟೈಲ್ ಮಾಡಿಸುವಂತೆ ಆದೇಶಿಸಲಾಗಿದೆ. ಶಾಲೆಯ ವಿದ್ಯಾರ್ಥಿಗಳು ಗಡ್ಡ ಬೆಳೆಸುವಂತಿಲ್ಲ ಎಂದೂ ಹೇಳಿರುವ ಆಡಳಿತ ಅದಕ್ಕೆ ಕಾರಣವನ್ನೂ ನೀಡುತ್ತಾ ‘‘ ಇದು ಜನರು ನಮಾಜ್ ಸಲ್ಲಿಸುವ ಸ್ಥಳ ಅಲ್ಲ’’ ಎಂದಿದೆ. ಅಷ್ಟೇ ಅಲ್ಲ ಶಾಲೆಗೆ ವಿದ್ಯಾರ್ಥಿಗಳು ಮಧ್ಯಾಹ್ನದೂಟಕ್ಕೆ ಮಾಂಸಾಹಾರ ತರಲು ನಿರ್ಬಂಧ ಹೇರಿದ್ದು, ವಿದ್ಯಾರ್ಥಿ ವಿದ್ಯಾರ್ಥಿನಿಯರನ್ನು ಪ್ರತ್ಯೇಕವಾಗಿಯೂ ಇಟ್ಟಿದ್ದು ಇದು ‘ಲವ್ ಜಿಹಾದ್’ ತಡೆಯುವ ಕ್ರಮ ಎಂದಿದೆ.
ಶಾಲಾಡಳಿತದ ನಿರ್ದೇಶನದಂತೆ ಹೇರ್ ಕಟ್ ಮಾಡದೇ ಇದ್ದ ಕೆಲ ವಿದ್ಯಾರ್ಥಿಗಳನ್ನು ರಿಷಬ್ ಅಕಾಡಮಿ ಕೊ-ಎಜುಕೇಶನಲ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ಪ್ರವೇಶಿಸಲು ಅನುಮತಿ ನೀಡದೇ ಇದ್ದಾಗ ಮೇಲಿನ ವಿಚಾರಗಳು ಬೆಳಕಿಗೆ ಬಂದಿದ್ದವು.
‘‘ನಾವು ಮಕ್ಕಳಿಗೆ ಆದಿತ್ಯನಾಥ್ ರೀತಿಯ ಹೇರ್ ಕಟ್ ಮಾಡಲು ಹೇಳಿದ್ದೆವು. ಅವರಿಗೆ ನಾವು ಹೇಳಿದ್ದು ಅರ್ಥವಾಗಿಲ್ಲ. ನಮಗೆ ಸೇನೆಯ ಜವಾನರ ಹೇರ್ ಕಟ್ ನಂತಹ ಹೇರ್ ಕಟ್ ಬೇಕು. ಇದು ಮದರಸ ಅಥವಾ ನಮಾಝ್ ಸಲ್ಲಿಸುವ ಸ್ಥಳವಲ್ಲ. ಆದ್ದರಿಂದ ಮಕ್ಕಳಿಗೆ ಗಡ್ಡ ಬೆಳೆಸದಂತೆ ಹೇಳಲಾಗಿದೆ’’ ಎಂದು ಶಾಲಾ ಆಡಳಿತ ಸಮಿತಿಯ ಕಾರ್ಯದರ್ಶಿ ರಂಜೀತ್ ಜೈನ್ ಹೇಳಿದ್ದಾರೆ. ಶಾಲೆಯು ಜೈನ್ ಟ್ರಸ್ಟ್ ನಿಂದ ನಡೆಸಲ್ಪಡುತ್ತಿರುವುದರಿಂದ ಜೈನ್ ಆಹಾರ ಪದ್ಧತಿಯನುಸಾರ ಇಲ್ಲಿ ಮಕ್ಕಳು ತಮ್ಮ ಮಧ್ಯಾಹ್ನದೂಟಕ್ಕೆ ಮಾಂಸಾಹಾರ ತರುವಂತಿಲ್ಲ ಎಂದು ಶಾಲಾಡಳಿತ ಹೇಳಿದೆ. ಈ ನಿಯಮ ಜಾರಿಯಾಗುವಂತೆ ನೋಡಿಕೊಳ್ಳಲು ಧಿಡೀರ್ ತಪಾಸಣೆ ನಡೆಸಲಾಗುತ್ತಿದೆ ಎಂದೂ ತಿಳಿಸಿದೆ.
‘‘ಅಷ್ಟೇ ಅಲ್ಲ ಈ ಶಾಲೆಯಲ್ಲಿ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಕೊಠಡಿಗಳಲ್ಲಿ ಪಾಠ ಮಾಡಲಾಗುತ್ತಿದೆ. ಹುಡುಗಿಯರು ಮುಸ್ಲಿಂ ಹುಡುಗರೊಡನೆ ಸ್ನೇಹ ಬೆಳೆಸದಂತೆ ತಡೆಯುವ ಯತ್ನ ಇದಾಗಿದೆ,’’ಎಂದು ರಂಜೀತ್ ಜೈನ್ ಹೇಳಿಕೊಂಡಿದ್ದಾರೆ.







